ರಸ್ತೆ ವಂಚಿತ ಕುಟುಂಬದಿಂದ ಮತದಾನ ಬಹಿಷ್ಕಾರ

ರಸ್ತೆ ವಂಚಿತ ಕುಟುಂಬದಿಂದ ಮತದಾನ ಬಹಿಷ್ಕಾರ


ಕೊಣಾಜೆ: ಕುರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿನ್ನಾಜೆ ಬೆಟ್ಟುವಿನ ರಸ್ತೆ ಅತಿಕ್ರಮಣದಿಂದ ಸಂಕಷ್ಟಕ್ಕೀಡಾಗಿರುವ ರಸ್ತೆ ವಂಚಿತ ಕುಟುಂಬಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಕುರ್ನಾಡು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ದಲಿತ ಸೇವಾ ಸಮಿತಿ ಅಧ್ಯಕ್ಷ ಸೇಸಪ್ಪ ಬೆದ್ರಕಾಡು, ಹಲವು ವರ್ಷಗಳಿಂದ ಬಳಕೆಯಲ್ಲಿರುವ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಣ ಮಾಡಿರುವುದರಿಂದ ಹನ್ನೆರಡಕ್ಕೂ ಹೆಚ್ಚು ಕುಟುಂಬಗಳು ತೀವ್ರ ತೊಂದರೆ ಅನುಭವಿಸುತ್ತಿವೆ, ರಸ್ತೆ ಶೀಘ್ರ ತೆರವಾಗದಿದ್ದಲ್ಲಿ ಸಂಬಂಧಿಸಿದ ಕುಟುಂಬಗಳು ಮುಂದಿನ ಚುನಾವಣೆಯನ್ನು ಬಹಿಷ್ಕರಿಸಲಿವೆ ಎಂದರು. 

ರಸ್ತೆ ವಂಚಿತ ದೇವಕಿ ಮಾತನಾಡಿ, “ಹಲವು ವರ್ಷಗಳಿಂದ ಈ ರಸ್ತೆಯನ್ನೇ ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದೇವೆ. ಏಕಾಏಕಿ ರಸ್ತೆ ಮುಚ್ಚಿರುವುದರಿಂದ ಅನಾರೋಗ್ಯದಿಂದ ಬಳಲುತ್ತಿರುವ ನನ್ನ ಮಕ್ಕಳನ್ನು ಸ್ಥಳೀಯ ಕಾಲುದಾರಿಯಲ್ಲಿ ಸಾಗಿಸಿ ಚಿಕಿತ್ಸೆ ಕೊಡಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆ ನಮಗೆ ಅತ್ಯಂತ ಅಗತ್ಯವಾಗಿದೆ” ಎಂದು ನೋವು ವ್ಯಕ್ತಪಡಿಸಿದರು. 

ಸ್ಥಳೀಯ ನಿವಾಸಿ ಸಂತೋಷ್ ಮಾತನಾಡಿ, “ನಾವೆಲ್ಲರೂ ಸಹಜೀವನ ನಡೆಸುತ್ತಾ ಸಾರ್ವಜನಿಕ ಹಿತದೃಷ್ಟಿ ಯಿಂದಲೇ ಈ ರಸ್ತೆಯನ್ನು ನಿರ್ಮಿಸಿದ್ದೇವೆ. ಮುಂದೆಯೂ ಈ ರಸ್ತೆ ಎಲ್ಲರಿಗೂ ಉಪಯೋಗವಾಗುವಂತೆ ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮಕ್ಕಳು, ವೃದ್ಧರು ಹಾಗೂ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಪರಿಹಾರ ಕಲ್ಪಿಸಬೇಕು” ಎಂದು ಮನವಿ ಮಾಡಿದರು. 

ಪ್ರತಿಭಟನೆ ವೇಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರು ಅತಿಕ್ರಮಣಗೊಂಡ ರಸ್ತೆಯನ್ನು ತೆರವುಗೊಳಿಸುವ ಭರವಸೆ ನೀಡಿದರು. 

ಈ ಸಂದರ್ಭ ವಿವಿಧ ಸಂಘಗಳ ಪದಾಧಿಕಾರಿಗಳು, ಸ್ಥಳೀಯರು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article