ನಗರದಲ್ಲೂ ಸಂಚರಿಸಲಿದೆ ಕೆಎಸ್‌ಆರ್‌ಟಿಸಿ
ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್ಟಿಸಿ) ಬಸ್ಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ 1991ರ ಜ.5ರಂದು ಹಾಗೂ 1993 ರ ಏ 6ರಂದು ಹೊರಡಿಸಿದ್ದ ಅಧಿಸೂಚನೆಯ ನಿಬಂಧನೆಗಳಿಂದ ವಿನಾಯಿತಿ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಈ ಕುರಿತು ಆದೇಶ ಮಾಡಿದ್ದು, ಸ್ಟೇಟ್‌ಬ್ಯಾಂಕ್‌ನಿಂದ ನೇರವಾಗಿ ಜಿಲ್ಲೆಯ ವಿವಿಧ ಕಡೆಗಳಿಗೆ ಹಾಗೂ ಹೊರ ಜಿಲ್ಲೆಗಳಿಗೆ ಬಸ್ ಸೇವೆ ಆರಂಭಿಸುವುದಕ್ಕೆ ಇದ್ದ ಅಡ್ಡಿ ಇದರಿಂದಾಗಿ ನಿವಾರಣೆ ಆದಂತಾಗಿದೆ.
‘ಮಂಗಳೂರು ನಗರದ ಕೇಂದ್ರ ಭಾಗದಲ್ಲಿ ಸಾರ್ವಜನಿಕ ಸಮೂಹ ಸಾರಿಗೆ ಉತ್ತೇಜಿಸಲು ಮತ್ತು ವೈಯಕ್ತಿಕ ವಾಹನಗಳ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ಎಲ್ಲಾ ವಾಹನಗಳಿಗೆ ಡಿ.ಎಂ. ಅಧಿಸೂಚನೆಯಿಂದ ವಿನಾಯಿತಿ ನೀಡಲಾಗಿದೆ. ನಗರದ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ, ಶಕ್ತಿ ಯೋಜನೆಯ ಪ್ರಯೋಜನ ಪಡೆಯಲು ಬಯಸುವ ಮಹಿಳಾ ಪ್ರಯಾಣಿಕರಿಗೆ, ಸಾರ್ವಜನಿಕ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಇದರಿಂದ ಅನುಕೂಲವಾಗಲಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದಲೂ ಇದು ಪ್ರಯೋಜನಕಾರಿ’ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.