ವಿದ್ಯಾರ್ಥಿನಿ ಅಪಹರಣ ಪ್ರಕರಣ ಕಟ್ಟು ಕತೆ: ಮಂಗಳೂರು ಕಾಲೇಜು ಸೇರಲು ವಿದ್ಯಾರ್ಥಿನಿ ಹೆಣೆದ ಸುಳ್ಳಿನ ಕಂತೆ
ಮಂಗಳೂರು: ಜಿಲ್ಲೆಯಾದ್ಯಂತ ಭಾರೀ ಕುತೂಹಲ ಮೂಡಿಸಿದ್ದ ಬೆಳ್ತಂಗಡಿಯ ಅಪ್ರಾಪ್ತ ವಿದ್ಯಾರ್ಥಿನಿಯ ಅಪಹರಣ ಯತ್ನ ಪ್ರಕರಣದ ಹಿಂದಿನ ಸತ್ಯಾಂಶ ಬಯಲಾಗಿದ್ದು, ಇದೊಂದು ಕಟ್ಟುಕತೆ ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಕಾಶಿಬೆಟ್ಟು ಸರ್ಕಾರಿ ಕಾಲೇಜಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಸುದೆಮುಗೇರು ಎಂಬಲ್ಲಿ ತಡೆದ ಕಾರಿನಲ್ಲಿ ಬಂದಿದ್ದ ಮುಸುಕುಧಾರಿಗಳ ತಂಡ ಅಪಹರಣಕ್ಕೆ ಯತ್ನಿಸಿತ್ತು. ಈ ವೇಳೆ ತನ್ನ ಕೈಗೆ ಚೂರಿಯಿಂದ ಹಲ್ಲೆ ಮಾಡಿದ್ದಾರೆಂದು ಯುವತಿ ದೂರಿದ್ದು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ಭಾರೀ ಸಂಚಲನ ಮೂಡಿಸಿದ್ದರಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಪೊಲೀಸರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಲ್ಲದೆ ಪೊಲೀಸ್ ವೈಫಲ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಕಾರಿನ ನಂಬರ್ ಪ್ಲೇಟಿಗೆ ಬಟ್ಟೆ ಕಟ್ಟಿದ್ದರು, ಮುಖಕ್ಕೆ ಮುಸುಕು ಹಾಕಿದ್ದು ಮೂವರಿದ್ದರು, ಹಿಂದಿನಿಂದ ಬೈಕ್ ಬಂದಿದ್ದನ್ನು ನೋಡಿ ಕಾರಿನಲ್ಲಿದ್ದವರು ತನ್ನನ್ನು ಬಿಟ್ಟು ಎಸ್ಕೇಪ್ ಪರಾರಿಯಾಗಿದ್ದಾರೆ ಎಂದು ಯುವತಿ ತಿಳಿಸಿದ್ದಳು. ಇದರಂತೆ, ಪೊಲೀಸರು ಆಸುಪಾಸಿನಲ್ಲಿ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದರು. ಪೊಲೀಸರಿಗೆ ಯಾವುದೇ ಸಾಕ್ಷ್ಯಗಳು ಸಿಗದೇ ಇದ್ದುದರಿಂದ ವಿದ್ಯಾರ್ಥಿನಿಯನ್ನೇ ಹೆಚ್ಚುವರಿ ಮಾಹಿತಿ ಪಡೆಯಲು ಮುಂದಾಗಿದ್ದರು. ಕಾರಿನ ಬಣ್ಣ ಯಾವುದು, ಯಾವ ಕಾರು, ಹೇಗಿತ್ತು, ಘಟನೆ ಕರೆಕ್ಟ್ ಆಗಿ ಎಲ್ಲಿ ಆಗಿರುವುದು ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟಾಗ ಆಕೆ ತಬ್ಬಿಬ್ಬು ಆಗಿದ್ದಳು.
ಕೊನೆಗೆ, ಅಪಹರಣ ಘಟನೆಯೇ ಸುಳ್ಳು, ಮಂಗಳೂರಿನ ಕಾಲೇಜು ಸೇರುವುದಕ್ಕಾಗಿ ಅಪಹರಣದ ಕತೆ ಕಟ್ಟಿದ್ದಾಗಿ ತಿಳಿಸಿದ್ದಾಳೆ. ಗ್ರಾಮೀಣ ಭಾಗದ ಕಾಲೇಜು ಬದಲು ಮಂಗಳೂರು ನಗರದ ಕಾಲೇಜಿಗೆ ಹೋಗಲು ಬಯಸಿದ್ದು ಅದಕ್ಕಾಗಿ ತಾನೇ ಬ್ಲೇಡ್‌ನಿಂದ ಕೈಯನ್ನು ಕೊಯ್ದುಕೊಂಡಿದ್ದಾಗಿ ತಿಳಿಸಿದ್ದಾಳೆ. ಇದಲ್ಲದೆ, ತನ್ನ ಮನೆಯ ಸಮೀಪವೇ ಪುಸ್ತಕಗಳನ್ನು ಸುಟ್ಟು ಹಾಕಿದ್ದಳು, ಇದರಂತೆ, ತನ್ನ ಬ್ಯಾಗನ್ನು ಅಪಹರಣಕ್ಕೆ ಬಂದಿದ್ದವರು ಹೊತ್ತೊಯ್ದಿದ್ದಾರೆ ಎಂದು ಕತೆ ಸೃಷ್ಟಿಸಿದ್ದಳು.
ಬಾಲಕಿಯು ಸುಳ್ಳು ಹೇಳಿಕೆ ನೀಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಬಾಲಕಿಯು ಅಪ್ರಾಪ್ತೆಯಾಗಿರುವುದರಿಂದ ಆಕೆಯ ಹಿತದೃಷ್ಠಿಯಿಂದ ಘಟನೆಯನ್ನು ಸೂಕ್ಷ್ಮವಾಗಿ ಪರಿಗಣಿಸಿ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಅವರಿಂದ ಬಾಲಕಿಗೆ ಕೌನ್ಸೆಲಿಂಗ್ ನೀಡಲಾಗುವುದು ಹಾಗೂ ಮುಂದಿನ ಕಾನೂನು ಕ್ರಮವನ್ನು ನಿರ್ಧರಿಸಲಾಗುವುದು. ಅಪ್ರಾಪ್ತೆಗೆ ಚಲಾಯಿಸಲು ವಾಹನ ನೀಡಿರುವ ಕುರುತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ. ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ತಿಳಿಸಿದ್ದಾರೆ.
ಅಬ್ಬುಸಾಲಿ ಕತೆ ಏನು..
ವಿದ್ಯಾರ್ಥಿನಿ ಸಂಕಷ್ಟದಲ್ಲಿದ್ದಾಗಲೇ ಆ ರಸ್ತೆಯಲ್ಲಿ ಅಪತ್ಭಾಂಧವನಂತೆ ಅಬ್ಬುಸಾಲಿ ಬಂದಿದ್ದಾನೆ. ಹಿಂದಿನಿಂದ ಬರುತ್ತಿದ್ದ ಅಬ್ಬುಸಾಲಿ ಅವರನ್ನು ಕಂಡ ತಕ್ಷಣ, ಸಿಕ್ಕಿಬೀಳುವ ಭಯದಿಂದ ಮೂವರು ಆರೋಪಿಗಳು ಕಾರು ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ. ತಕ್ಷಣವೇ ಸ್ಪಂದಿಸಿದ ಅಬ್ಬುಸಾಲಿ ಅವರು, ಗಾಯಗೊಂಡು ಭಯಭೀತವಾಗಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಮಯ ಪ್ರಜ್ಞೆ ಮೆರೆದ ಅಬ್ಬುಸಾಲಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತವಾಗಿತ್ತು, ಆದರೆ ಇದೀಗ ಸಂಪೂರ್ಣ ಪ್ರಕರಣವೇ ಸುಳ್ಳು ಎಂದು ತನಿಖೆಯಿಂದ ಬಯಲಾಗಿರುವುದರಿಂದ ಅಬ್ಬುಸಾಲಿ ಕೂಡಾ ಕಟ್ಟು ಕತೆ ಕಟ್ಟಿದ್ದಾರೆ ಎಂಬ ಸಂಶಯ ಎದುರಾಗಿದೆ.