ಗೂಗಲ್ ಮ್ಯಾಪ್ ಅನುಸರಿಸಿ ಕೊಲ್ಲೂರು ಮಾರ್ಗ ಬಿಟ್ಟು ಹೊಳೆಗೆ ಹಾರಲು ಹೊರಟ ಕಾರು!
ಕೇರಳ ಮೂಲದ ಕುಟುಂಬವೊಂದು ಕೊಲ್ಲೂರು ಶ್ರೀ ಮೂಕಾಂಬಿಕೆ ದರ್ಶನಕ್ಕಾಗಿ ಪ್ರಯಾಣಿಸುತ್ತಿದ್ದರು. ಕೊಲ್ಲೂರು ಮಾರ್ಗ ನಿರ್ದೇಶನಕ್ಕಾಗಿ ಚಾಲಕ ಗೂಗಲ್ ರೋಡ್ ಮ್ಯಾಪ್ ಅನುಸರಿಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರ ಕಡೆಗೆ ಸಂಚರಿಸುತ್ತಿದ್ದ ವೇಳೆ ಗೂಗಲ್ ಮ್ಯಾಪ್‌ನಲ್ಲಿ ಡೈವರ್ಶನ್ ಎಂದು ತೋರಿಸಿತು. ಚಾಲಕ ಕಾರನ್ನು ಸಾಯಿಬ್ರಕಟ್ಟೆ ಕಡೆಗೆ ತಿರುಗಿಸಿದ. ಕಾರು ಗೂಗಲ್ ಸೂಚನೆ ಅನುಸರಿಸುತ್ತಾ ಉಡುಪಿ ಜಿಲ್ಲೆಯ ಬ್ರಹ್ಮಾವರ ಬಳಿ ಬಾರ್ಕೂರು ಮಾರ್ಗವಾಗಿ ಸಾಯಿಬ್ರಕಟ್ಟೆ ಮೂಲಕ ಕೋಟದತ್ತ ಸಾಗಿತ್ತು.
ಉಪ್ಲಾಡಿ ಹೊಳೆ ಸಮೀಪ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಮೊದಲು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು, ನಂತರ ಹೊಳೆ ಬದಿಯ ಸಿಮೆಂಟ್ ಕಂಬದ ಮೇಲೆ ಹತ್ತಿ ನಿಂತಿದೆ. ಹೊಳೆಗೆ ಕೇವಲ ಒಂದು ಅಡಿ ಅಂತರದಲ್ಲಿ ಕಾರು ನಿಂತಿದ್ದರಿಂದ ಭಾರೀ ದುರಂತ ತಪ್ಪಿದಂತಾಗಿದೆ.
ಕಾರಿನಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಒಟ್ಟು 5 ಮಂದಿ ಪ್ರಯಾಣಿಸುತ್ತಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಕೋಟ ಪೊಲೀಸ್ ಸಿಬ್ಬಂದಿ ರಾಘವೇಂದ್ರ, ಆಂಬುಲೆನ್ಸ್ ಚಾಲಕ ಕಿಶೋರ್ ಶೆಟ್ಟಿ ಹಾಗೂ ಸ್ಥಳೀಯರ ಸಹಕಾರದಿಂದ ಕಾರಿನಲ್ಲಿದ್ದವರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.