ನಮ್ಮ ನಡಿಗೆ ಶ್ರೀ ಗುರುವಿನೆಡೆಗೆ: ಕುದ್ರೋಳಿ ತೀರ್ಥಾಟನೆಯಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರ ಭಾಗಿ ನಿರೀಕ್ಷೆ
ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಸಿದ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯ ಸ್ಮರಣಾರ್ಥವಾಗಿ ಫೆ.21 ರಂದು ಹಮ್ಮಿಕೊಳ್ಳಲಾಗಿರುವ ‘ನಮ್ಮ ನಡಿಗೆ ಶ್ರೀ ಗುರುವಿನೆಡೆಗೆ’ ಕುದ್ರೋಳಿ ತೀರ್ಥಾಟನೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಅನುಯಾಯಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಶಿವಗಿರಿ ಸೇರಿದಂತೆ ಅವಿಭಜಿತ ದ.ಕ. ಜಿಲ್ಲೆಯ ವಿವಿಧ ಮಠಗಳ ಸ್ವಾಮೀಜಿಗಳು, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, ವಿವಿಧ ಕ್ಷೇತ್ರದ ನಾಯಕರು ಪಾಲ್ಗೊಳ್ಳಲಿದ್ದಾರೆ.
ಐತಿಹಾಸಿಕ ಹಿನ್ನೆಲೆ:
1912 ಫೆಬ್ರವರಿ 21ರಂದು ಬ್ರಹ್ಮಶ್ರೀ ನಾರಾಯಣ ಗುರುಗಳು ಕುದ್ರೋಳಿ ಕ್ಷೇತ್ರದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುವ ಮೂಲಕ ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಮಹತ್ತರ ಧಾರ್ಮಿಕ ಕ್ರಾಂತಿಗೆ ನಾಂದಿ ಹಾಡಿದ್ದರು. ಈ ಐತಿಹಾಸಿಕ ಕ್ಷಣದ ಸವಿನೆನಪಿಗಾಗಿ ಪ್ರತಿವರ್ಷ ಈ ಸಂಭ್ರಮವನ್ನು ಶ್ರೀಕ್ಷೇತ್ರದಲ್ಲಿ ವೈಭವದಿಂದ ಆಚರಿಸಲು ತೀರ್ಮಾನಿಸಲಾಗಿದೆ.
ಅಂದು ಬೆಳಗ್ಗೆ 7.30ಕ್ಕೆ ಕುದ್ರೋಳಿ ಕ್ಷೇತ್ರದಲ್ಲಿ ವೈದಿಕರಿಂದ ಭಕ್ತಿಪೂರ್ವಕ ಗುರು ಪ್ರಾರ್ಥನೆ ಸಲ್ಲಿಸಿ, ಬೆಳಗ್ಗೆ 9 ಗಂಟೆಗೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಯಾತ್ರೆಯ ಸಾಂಕೇತಿಕ ಶುಭಾರಂಭವಾಗಲಿದೆ. ಬೆಳಗ್ಗೆ 9.30ಕ್ಕೆ ಕುದ್ಮಲ್ ರಂಗರಾವ್ ಪುರಭವನದಲ್ಲಿ ಶ್ರೀ ಗುರುಗಳ ಅನುಯಾಯಿಗಳ ‘ಮಹಾಸಂಗಮ’ ನಡೆಯಲಿದೆ.
ಯಾತ್ರೆಯು ಪುರಭವನ-ಕೆ.ಎಸ್. ರಾವ್ ರಸ್ತೆ-ನವಭಾರತ ಸರ್ಕಲ್, ಪಿ.ವಿ.ಎಸ್ ವೃತ್ತ, ಶ್ರೀ ನಾರಾಯಣ ಗುರು ಸರ್ಕಲ್ ಮೂಲಕ ಕುದ್ರೋಳಿ ಕ್ಷೇತ್ರವನ್ನು ತಲುಪಲಿದೆ. ಬೆಳಗ್ಗೆ 11.30ಕ್ಕೆ ಶ್ರೀ ಕುದ್ರೋಳಿ ಕ್ಷೇತ್ರಕ್ಕೆ ತೀರ್ಥಾಟನೆ ಆಗಮನ, ಪವಿತ್ರ ಬಿಲ್ವ ಪತ್ರೆ ಅರ್ಚನೆ ಬಳಿಕ ಸ್ವಾಮೀಜಿಗಳ ಆಶೀರ್ವಚನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.