ಕೇಂದ್ರ ಬಜೆಟ್–2026-‘2047ರ ವಿಕಸಿತ ಭಾರತ’ ಗುರಿಯತ್ತ ಐತಿಹಾಸಿಕ ಹೆಜ್ಜೆ: ಸತೀಶ ಕುಂಪಲ
ಮಂಗಳೂರು: ನವದೆಹಲಿ ಕೇಂದ್ರ ವಿತ್ತ ಸಚಿವೆ ಅವರು ಮಂಡಿಸಿದ ಕೇಂದ್ರ ಬಜೆಟ್–2026 ‘2047ರ ವಿಕಸಿತ ಭಾರತ’ ಸಂಕಲ್ಪವನ್ನು ನೆಲೆಗೆ ತರುವ ದೂರದೃಷ್ಟಿಯ, ಜನಪರ ಹಾಗೂ ಅಭಿವೃದ್ಧಿ ಪರ ಬಜೆಟ್ ಆಗಿದೆ ಎಂದು ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸತೀಶ ಕುಂಪಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಿರುವ ಈ ಬಜೆಟ್‌ನಲ್ಲಿ ‘She mart’ ಯೋಜನೆ ಮೂಲಕ ಮಹಿಳೆಯರ ಶಿಕ್ಷಣ, ಉದ್ಯೋಗ, ಉದ್ಯಮಶೀಲತೆ ಹಾಗೂ ಡಿಜಿಟಲ್ ಕೌಶಲ್ಯ ಅಭಿವೃದ್ಧಿಗೆ ಬಲ ನೀಡಲಾಗಿದೆ. ಇದು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಮಹತ್ವದ ಹೆಜ್ಜೆಯಾಗಿದೆ.
ಕರಾವಳಿ ಕರ್ನಾಟಕದಲ್ಲಿ ಟ್ರೆಕ್ಕಿಂಗ್ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ನೀಡಿರುವುದು ನಮ್ಮ ಜಿಲ್ಲೆಯ ಆರ್ಥಿಕ ಬೆಳವಣಿಗೆಗೆ ಹೊಸ ಆಯಾಮ ನೀಡಲಿದೆ. ಇದರಿಂದ ಸ್ಥಳೀಯ ಉದ್ಯೋಗ ಸೃಷ್ಟಿಯ ಜೊತೆಗೆ ಪ್ರವಾಸೋದ್ಯಮಕ್ಕೆ ವೇಗ ಸಿಗಲಿದೆ.
ಬೆಂಗಳೂರು–ಹೈದ್ರಾಬಾದ್ ಮತ್ತು ಬೆಂಗಳೂರು–ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಹಾಗೂ ಬೆಂಗಳೂರು ನಗರಕ್ಕೆ ಸ್ಪೀಡ್ ರೈಲು ಯೋಜನೆ ಘೋಷಣೆಯಿಂದ ದಕ್ಷಿಣ ಭಾರತದ ಆರ್ಥಿಕ ಸಂಪರ್ಕ ಇನ್ನಷ್ಟು ಬಲಗೊಳ್ಳಲಿದೆ.
ದೇಶದ ತಂತ್ರಜ್ಞಾನ ಸ್ವಾವಲಂಬನೆಗಾಗಿ ಸೆಮಿಕಂಡಕ್ಟರ್ ಮಿಷನ್‌ಗೆ ₹40,000 ಕೋಟಿ ಮೀಸಲಿಟ್ಟಿರುವುದು ‘ಮೇಕ್ ಇನ್ ಇಂಡಿಯಾ’ಗೆ ಬಲ ನೀಡಲಿದೆ.
ರಕ್ಷಣಾ ಕ್ಷೇತ್ರಕ್ಕೆ ₹6 ಲಕ್ಷ ಕೋಟಿವರೆಗೆ ಹಾಗೂ ಸಾರಿಗೆ ಕ್ಷೇತ್ರಕ್ಕೆ ₹6 ಲಕ್ಷ ಕೋಟಿವರೆಗೆ ಮೀಸಲಿಟ್ಟು, 4,000 ಇವಿ ಬಸ್‌ಗಳ ವ್ಯವಸ್ಥೆ ಮಾಡುವ ನಿರ್ಧಾರ ದೇಶದ ಭದ್ರತೆ ಮತ್ತು ಹಸಿರು ಸಾರಿಗೆಗೆ ಉತ್ತೇಜನ ನೀಡಲಿದೆ.
ಗ್ರಾಮೀಣಾಭಿವೃದ್ಧಿಗೆ ₹3 ಲಕ್ಷ ಕೋಟಿವರೆಗೆ ಮೀಸಲಿಟ್ಟಿರುವುದರಿಂದ ಗ್ರಾಮೀಣ ಆರ್ಥಿಕತೆ ಬಲಿಷ್ಠವಾಗಲಿದೆ. ಮೊಬೈಲ್, ಔಷಧಿ, ಬಟ್ಟೆ, ಮೀನು, ಇವಿ ಬ್ಯಾಟರಿ, ಬಯೋಗ್ಯಾಸ್–CNG ಸೇರಿದಂತೆ ಅಗತ್ಯ ವಸ್ತುಗಳ ದರ ಇಳಿಕೆ ಜನಸಾಮಾನ್ಯರಿಗೆ ನೇರ ಲಾಭ ನೀಡಲಿದೆ. ವಿಶೇಷವಾಗಿ ಶುಗರ್ ಹಾಗೂ ಕ್ಯಾನ್ಸರ್ ಔಷಧಿಗಳ ದರ ಇಳಿಕೆ ಬಡ ಮತ್ತು ಮಧ್ಯಮ ವರ್ಗದವರಿಗೆ ಮಹತ್ತರ ನೆರವಾಗಲಿದೆ.
ಜವಳಿ ಉದ್ಯಮ ಅಭಿವೃದ್ಧಿಗೆ ರಾಷ್ಟ್ರೀಯ ನೀತಿ, ಹಾಗೂ ಮಹಾತ್ಮಾ ಗಾಂದಿ ಗ್ರಾಮ್ ಸಮಾಜ್ ಯೋಜನೆ ಮೂಲಕ ಖಾದಿ ಮತ್ತು ಕರಕುಶಲ ಉದ್ಯಮಕ್ಕೆ ಬೆನ್ನೆಲುಬಾಗಿ ನಿಂತಿದೆ. ತೆಂಗು, ಗೋಡಂಬಿ, ಕೊಕ್ಕೊ ಬೆಳೆಗಳಿಗೆ ಉತ್ತೇಜನ ಸಹಾಯ ನೀಡಿರುವುದು ರೈತರಿಗೆ ಆರ್ಥಿಕ ಭದ್ರತೆ ಒದಗಿಸಲಿದೆ.
GDP ಏರಿಕೆ ಮತ್ತು ಬಡತನದ ಸ್ಪಷ್ಟ ಇಳಿಕೆ ಈ ಹಿಂದಿನ ಬಜೆಟ್‌ನ ಯಶಸ್ಸನ್ನು ತೋರಿಸುತ್ತದೆ. ಇಂದಿನ ಬಜೆಟ್ ನಿಜಾರ್ಥದಲ್ಲಿ “ಬಡತನ ಹೋಗಲಾಡಿಸುವ ಬಜೆಟ್” ಆಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಪರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಸತೀಶ ಕುಂಪಲ ಅವರು ತಿಳಿಸಿದ್ದಾರೆ.