ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಬಂಧನ: 22.250 ಕೆ.ಜಿ ಅಕ್ರಮ ಗಾಂಜಾ ವಶ
ಬಂಧಿತರನ್ನು ಮಹಾರಾಷ್ಟ್ರದ ಜಲಗಾಂ ಜಿಲ್ಲೆಯ ಚೊಪ್ಪಡ ತಾಲೂಕಿನ ಸಮತಾ ನಗರದ ನಿವಾಸಿ ಕರಣ್ ಬಾಬು ರಾಂ ಜಾದವ್ (27), ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಚಪಡ ನಿವಾಸಿ ಸಮೀರ್ ಶಾ (19), ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮದ ನಿವಾಸಿ ಎಂ.ಹೆಚ್. ಮಯ್ಯದಿ (48), ಮಂಗಳೂರಿನ ಕುದ್ರೋಳಿಯ ನಿವಾಸಿ ಇಬ್ರಾಹಿಂ ಕಲೀಲ್ (47) ಎಂದು ಗುರುತಿಸಲಾಗಿದೆ.
ಬಂಧಿತರಿಂದ 22 ಕೆ.ಜಿ 250 ಗ್ರಾಂ. ಗಾಂಜಾ, (11,12,500 ರೂ.) ಮತ್ತು 6 ಮೊಬೈಲ್ ಪೋನ್ (18,000 ರೂ.) ಹಾಗೂ ಗಾಂಜಾ ಸಾಗಿಸಲು ಬಳಸಿದ 2 ಸ್ಕೂಟರ್‌ಗಳನ್ನು (1,00,000 ರೂ.) ವಶಪಡಿಸಿಕೊಳ್ಳಲಾಗಿದ್ದು, ಒಟ್ಟು ಮೌಲ್ಯ ಅಂದಾಜು 12,30,500 ರೂ. ಎಂದು ಅಂದಾಜಿಸಲಾಗಿದೆ.
ಫೆ.21 ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ, ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಬಳಿ ಗಾಂಜಾವನ್ನು ಮಾರಾಟ ಮಾಡಲು ಹೊರ ರಾಜ್ಯದಿಂದ ತಂದಿರುವ ಬಗ್ಗೆ ಮಾಹಿತಿ ಪಡೆದು ಉತ್ತರ ಉಪ ವಿಭಾಗದ ಎ.ಸಿ.ಪಿ. ಅವರು ಮತ್ತು ಅವರ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಪಣಂಬೂರು ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.
ಆರೋಪಿಗಳಾದ ಕರಣ್ ಬಾಬು ರಾಂ ಜಾದವ್ ಮತ್ತು ಸಮೀರ್ ಶಾ ಎಂಬವರು ಗಾಂಜಾವನ್ನು ಮಹಾರಾಷ್ಟ್ರ ಮಯ್ಯದಿ ಹಾಗೂ ಮಧ್ಯ ಪ್ರದೇಶ ಶಾರೂಕ್ ಎಂಬವರಿಂದ ಪಡೆದು ತಂದು ಉಡುಪಿ ಹೆಜಮಾಡಿ ಕೋಡಿಯ ಎಂ.ಹೆಚ್. ಮಯ್ಯದಿ ಮತ್ತು ಮಂಗಳೂರಿನ ಇಬ್ರಾಹಿಂ ಕಲೀಲ್ ಅವರಿಗೆ ನೀಡುತ್ತಿದ್ದು, ಈ ಇಬ್ಬರು ಗಾಂಜಾವನ್ನು ಉಡುಪಿ, ಮಲ್ಪೆ, ಕಾರ್ಕಳ, ಮುಲ್ಕಿ, ಸುರತ್ಕಲ್, ಪಣಂಬೂರು, ಹಾಗೂ ಮಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದುದಾಗಿ ತಿಳಿದು ಬಂದಿದ್ದು, ಈ ಹಿಂದೆ ಕೂಡಾ ಹಲವು ಭಾರಿ ಗಾಂಜಾವನ್ನು ಅಕ್ರಮವಾಗಿ ತಂದು ಉಡುಪಿ ಜಿಲ್ಲೆ ಮತ್ತು ಮಂಗಳೂರು ನಗರದಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪೊಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.