ಫೆ.22ರಂದು ಸ್ತ್ರೀ ವಿನೂತನ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ
ಮಂಗಳೂರು: ಮಂಗಳೂರಿನ ಸಂಗೀತ ಭಾರತಿ ಫೌಂಡೇಶನ್ ಸಂಸ್ಥೆಯ ಆಶ್ರಯದಲ್ಲಿ ‘ಸ್ತ್ರೀ’ ಎಂಬ ಪರಿಕಲ್ಪನೆಯಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಫೆ.22ರಂದು ಸಂಜೆ 5ರಿಂದ ನಗರದ ಮಂಗಳೂರಿನ ಉರ್ವ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಗೀತ ಭಾರತಿ ಫೌಂಡೇಶನ್ ಸಂಸ್ಥೆಯ ಕಾರ್ಯದರ್ಶಿ ಡಾ. ಉಷಾಪ್ರಭಾ ಎನ್. ನಾಯಕ್ ಹೇಳಿದರು.
ಅವರು ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಉತ್ಕೃಷ್ಟ ಮಟ್ಟದ ಶಾಸ್ತ್ರೀಯ ಗಾಯನ ಜುಗಲ್‌ಬಂಧಿ ಮತ್ತು ವಯೋಲಿನ್ ಟ್ರಿಯೋ ಕಾರ್ಯಕ್ರಮಗಳು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇದ್ದು, ಸಂಗೀತಪ್ರಿಯರಿಗೆ ಇದೊಂದು ಸಂಗೀತದ ರಸದೌತಣವಾಗಲಿದೆ. ಪೂರ್ವಾರ್ಧದಲ್ಲಿ ಯಲ್ಲಾಪುರದ ವಿಭಾ ಹೆಗ್ಡೆ ಮತ್ತು ಬೆಂಗಳೂರಿನ ಶಿವಾನಿ ಮಿರಾಜ್‌ಕರ್ ಅವರಿಂದ ಶಾಸ್ತ್ರೀಯ ಗಾಯನ ಜುಗಲ್‌ಬಂಧಿ ಕಾರ್ಯಕ್ರಮ ನಡೆಯಲಿದ್ದು ಇದಕ್ಕೆ ಹಾರ್ಮೋನಿಯಂನಲ್ಲಿ ಮಂಗಳೂರಿನ ಮೇಧಾ ಜಿ ಭಟ್ ಮತ್ತು ಭೋಪಾಲ್‌ನ ವಿಜೇತಾ ಹೆಗ್ಡೆ ಅವರು ತಬ್ಲಾದಲ್ಲಿ ಸಾಥ್ ನೀಡಲಿದ್ದಾರೆ ಎಂದರು.
ಉತ್ತಾರಾರ್ಧದಲ್ಲಿ ಮುಂಬಯಿಯ ಡಾ.ಸಂಗೀತ ಶಂಕರ್, ರಾಗಿಣಿ ಶಂಕರ್ ಮತ್ತು ನಂದಿನಿ ಶಂಕರ್ ಅವರಿಂದ ವಯೋಲಿನ್ ಟ್ರಿಯೋ ಕಾರ್ಯಕ್ರಮ ನಡೆಯಲಿದೆ. ಅವರಿಗೆ ತಬ್ಲಾದಲ್ಲಿ ಮುಂಬಯಿಯ ಅನುರಾಧ ಪಾಲ್ ಅವರು ಸಾಥ್ ನೀಡಲಿದ್ದಾರೆ. ಸ್ತ್ರೀ ಕಾರ್ಯಕ್ರಮವನ್ನು ನಗರದ ಪ್ರಖ್ಯಾತ ಸಂಗೀತಾ ಗುರುಗಳಾದ ಬಸ್ತಿ ಕವಿತಾ ಶೆಣೈ, ವಿಭಾ ನಾಯಕ್ ಹಾಗೂ ಶ್ರೀಲತಾ ಪ್ರಭು ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಸಂಗೀತ ಭಾರತಿ ಫೌಂಡೇಶನ್‌ನ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್, ಟ್ರಸ್ಟಿಗಳಾದ ಮುರುಳೀಧರ್ ಜಿ ಶೆಣೈ, ಡಾ. ರಮೇಶ್ ಕೆ.ಜಿ ಹಾಗೂ ಸದಸ್ಯರಾದ ಉಜ್ವಲ್ ಪ್ರದೀಪ್, ಶ್ವೇತಾ ಸುವರ್ಣ ಉಪಸ್ಥಿತರಿದ್ಧರು.