ಫೆ.22 ರಂದು ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ
ಮಂಗಳೂರು: ನೃತ್ಯ ಸುಧಾ ಮಂಗಳೂರು ಸಂಸ್ಥೆಯ ಸ್ಥಾಪಕಿ ವಿದುಷಿ ಸೌಮ್ಯ ಸುಧೀಂದ್ರ ರಾವ್ ಅವರ ಪುತ್ರಿ ಹಾಗೂ ಶಿಷ್ಯೆ ವಿದುಷಿ ಶ್ರೀಯಾ ರಾವ್ ಸಣ್ಣಯ್ಯ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಫೆ.22ರಂದು ಸಂಜೆ 5ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹಿರಿಯ ನೃತ್ಯಗುರು ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ವೈಸ್ ಛಾನ್ಸಲರ್ ರೆ. ಡಾ. ಪ್ರವೀಣ್ ಮಾರ್ಟಿಸ್, ಮೈಸೂರಿನ ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್ ನಿರ್ದೇಶಕ ಪ್ರೊ.ಕೆ. ರಾಮಮೂರ್ತಿ ರಾವ್, ಮಾಜಿ ಸಂಸದ ನಳಿನ್‌ಕುಮಾರ್ ಕಟೀಲು, ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಭಾಗವಹಿಸುವರು. ಈ ವೇಳೆ ಶ್ರೀಯಾ ಅವರ ಮೃದಂಗ ಗುರು ವಿದ್ವಾನ್ ರವಿಕುಮಾರ್ ಕುಂಜೂರು ಅವರಿಗೆ ಗುರುವಂದನೆ ನಡೆಯಲಿದೆ ಎಂದು ವಿದುಷಿ ಸೌಮ್ಯ ಸುಧೀಂದ್ರ ರಾವ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದುಷಿ ಶ್ರೀಯಾ ರಾವ್ ಅವರು ಸಂತ ಅಲೋಶಿಯಸ್ ವಿವಿಯಲ್ಲಿ ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ. ವಿದ್ವತ್ ಅಂತಿಮ ಪರೀಕ್ಷೆಯನ್ನು 2025ರಲ್ಲಿ ಪೂರೈಸಿದ್ದಾರೆ. ಮೃದಂಗ ಹಾಗೂ ಕರ್ನಾಟಕ ಸಂಗೀತ ಕಲಿಯುತ್ತಿದ್ದಾರೆ ಎಂದರು.
ಸಂಸ್ಥೆಯ ಅಧ್ಯಕ್ಷ ಡಾ. ಸುಧೀಂದ್ರ ರಾವ್, ವಿದುಷಿ ಶ್ರೀಯಾ ರಾವ್ ಸಣ್ಣಯ್ಯ, ವಿದುಷಿ ಸಹನಾ, ವಿದುಷಿ ನವ್ಯಾ ಭಟ್ ಉಪಸ್ಥಿತರಿದ್ದರು.