ರೈತ ಕಾರ್ಮಿಕರ ನೇತೃತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ: ದ.ಕ.ಜಿಲ್ಲೆಯಾದ್ಯಂತ ವ್ಯಾಪಕ ರಸ್ತೆತಡೆ ಹಾಗೂ ಪ್ರತಿಭಟನಾ ಸಭೆ

ರೈತ ಕಾರ್ಮಿಕರ ನೇತೃತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ: ದ.ಕ.ಜಿಲ್ಲೆಯಾದ್ಯಂತ ವ್ಯಾಪಕ ರಸ್ತೆತಡೆ ಹಾಗೂ ಪ್ರತಿಭಟನಾ ಸಭೆ

ಮಂಗಳೂರು: 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿರುವುದರ ವಿರುದ್ಧ, ಕಾರ್ಮಿಕ ವಿರೋಧಿ ಕಾರ್ಪೊರೇಟ್ ಪರ 4 ಕಾರ್ಮಿಕ ಸಂಹಿತೆಗಳ ವಿರುದ್ಧ, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ ವಿರುದ್ಧ ಹಾಗೂ ಉದ್ಯೋಗ ಖಾತ್ರಿ ಯೋಜನೆಗೆ ತಂದ ತಿದ್ದುಪಡಿ ವಿರೋಧಿಸಿ ರೈತ ಕಾರ್ಮಿಕರ ನೇತೃತ್ವದಲ್ಲಿ ನಾಳೆ(ಫೆಬ್ರವರಿ 12) ಅಖಿಲ ಭಾರತ ಮಹಾಮುಷ್ಕರ ನಡೆಯಲಿದ್ದು,ದ.ಕ.ಜಿಲ್ಲೆಯಾದ್ಯಂತ ವ್ಯಾಪಕ ರಸ್ತೆತಡೆ,ಮೆರವಣಿಗೆ ಹಾಗೂ ಪ್ರತಿಭಟನಾ ಸಭೆಗಳನ್ನು ನಡೆಸುವ ಮೂಲಕ ರೈತ ಕಾರ್ಮಿಕರು ಬೀದಿಗಿಳಿದು ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರತಿಭಟಿಸಲಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಪರವಾಗಿ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರಕಾರ ಭಾರತದ ಕಾರ್ಮಿಕ ವರ್ಗವನ್ನು ದುರ್ಬಲಗೊಳಿಸಿ ಮತ್ತೆ ಗುಲಾಮಗಿರಿಯತ್ತ ತಳ್ಳಲು, ಕಾರ್ಮಿಕರ ಹಕ್ಕು ಬಾಧ್ಯತೆಗಳನ್ನು ನಾಶ ಮಾಡಲು ಕಾರ್ಮಿಕ ಚಳುವಳಿಯನ್ನು ಹತ್ತಿಕ್ಕಲು ಹಾಗೂ ಬಂಡವಾಳಿಗರ ಲಾಭದ ಹಿತಾಸಕ್ತಿಗಳನ್ನು ಕಾಪಾಡಲು ಪ್ರಮುಖ 29 ಕಾನೂನುಗಳನ್ನು ರದ್ದುಗೊಳಿಸಿ, ಉದ್ಯಮಸ್ನೇಹಿ ಹೆಸರಿನಲ್ಲಿ ಕಾರ್ಪೊರೇಟ್ ಪರವಾದ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ.ಮತ್ತೊಂದು ಕಡೆ ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ ಜಾರಿಗೊಳಿಸಿರುವುದು ಹಾಗೂ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ತಿದ್ದುಪಡಿ ಮಾಡಿ ಗ್ರಾಮೀಣ ಪ್ರದೇಶದ ರೈತರು ಹಾಗೂ ಕೃಷಿಕೂಲಿಕಾರರ ಬದುಕನ್ನೇ ಸರ್ವನಾಶ ಮಾಡಲು ಹೊರಟಿದೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳು ತಿಳಿಸಿದೆ.

ನಾಳೆ ದೇಶಾದ್ಯಂತ ನಡೆಯಲಿರುವ ಮಹಾಮುಷ್ಕರದ ಭಾಗವಾಗಿ ದ.ಕ.ಜಿಲ್ಲೆಯ ತೊಕ್ಕೋಟು, ಮಂಗಳೂರು, ಗುರುಪುರ ಕೈಕಂಬ, ಮೂಡಬಿದ್ರೆ,ಬಿ ಸಿ ರೋಡ್, ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಎಲ್ಲಾ ತಾಲೂಕು, ವಲಯ ಕೇಂದ್ರಗಳಲ್ಲಿ ರಸ್ತೆತಡೆ, ಮೆರವಣಿಗೆ, ಹಾಗೂ ಪ್ರತಿಭಟನಾ ಸಭೆಗಳು ವ್ಯಾಪಕವಾಗಿ ಜರುಗಲಿದೆ. ಈ ಎಲ್ಲಾ ಪ್ರದೇಶಗಳಲ್ಲಿ  ವಿದ್ಯಾರ್ಥಿ ಯುವಜನರು,ಮಹಿಳೆಯರು, ದಲಿತ ಆದಿವಾಸಿ ಸೇರಿದಂತೆ ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ದೃಢವಾಗಿ ವಿರೋಧಿಸಬೇಕೆಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ (JCTU) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article