ವಿದ್ಯುತ್ ದರ ಏರಿಕೆ ಬೇಡ-ದುಂದುವೆಚ್ಚಕ್ಕೆ ಕಡಿವಾಣ ಬೀಳಲಿ: ಮೆಸ್ಕಾಂ ಸಾರ್ವಜನಿಕ ವಿಚಾರಣೆ ಸಭೆಯಲ್ಲಿ ಸಾರ್ವಜನಿಕರ ಆಗ್ರಹ
ಮೆಸ್ಕಾಂನ 2024-25ನೇ ಸಾಲಿನ ವಾರ್ಷಿಕ ಪುನರ್ ಪರಿಶೀಲನಾ ಅರ್ಜಿಯ ಕುರಿತು ಈ ವಿಚಾರಣೆ ನಡೆಯಿತು.
ಮೆಸ್ಕಾಂನ ದರ ಏರಿಕೆಯ ಪ್ರಸ್ತಾವ ಹಾಗೂ ಸಾರ್ವಜನಿಕರ ಬೇಡಿಕೆಯನ್ನು ಆಲಿಸಿದ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಗ್ರಾಹಕರು ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಎಲ್ಲವನ್ನು ಪರಿಶೀಲಿಸಲಾಗುವುದು. ಉಳಿದ ಎಸ್ಕಾಂಗಳಿಗೆ ಹೋಲಿಸಿದರೆ ಮೆಸ್ಕಾಂ ಉತ್ತಮ ಸಾಧನೆ ಮಾಡಿದೆ. ಈ ಬಾರಿ ದರ ಪರಿಷ್ಕರಣೆ ಇಲ್ಲ. ನಷ್ಟದ ಬಗ್ಗೆ ಮೆಸ್ಕಾಂ ಪ್ರಸ್ತಾವವನ್ನು ಪರಿಶೀಲಿಸಲಾಗುವುದು ಎಂದರು.
ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಆರಗ ಜ್ಞಾನೇಂದ್ರ ಅವರು, ಮೆಸ್ಕಾಂ ದರ ಕಡಿಮೆ ಮಾಡಬೇಕು ಹಾಗೂ ಆಯೋಗವು ಮೆಸ್ಕಾಂನ ಅನಿಯಮಿತ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಜಿ.ಕೆ.ಭಟ್ ಮಂಗಳೂರು ಮಾತನಾಡಿ, ಮೆಸ್ಕಾಂ ಆಡಳಿತ ವೆಚ್ಚವನ್ನು ಕಡಿಮೆ ಮಾಡಬೇಕು. ದಕ್ಷಿಣ ಭಾರತದ ಕೆಲವು ರಾಜ್ಯದಲ್ಲಿ ವಿದ್ಯುತ್ ದರ ಕಡಿಮೆ ಇದೆ. ಅದೇ ರೀತಿ ಇಲ್ಲೂ ಆಗಬೇಕು ಹಾಗೂ ಬೀದಿ ದೀಪ, ಸರಕಾರಿ ಕಚೇರಿ ಸೇರಿದಂತೆ ವಿವಿಧೆಡೆ ಅನಾವಶ್ಯಕವಾಗಿ ವಿದ್ಯುತ್ ನಷ್ಟ ಆಗುವುದನ್ನು ತಪ್ಪಿಸಬೇಕು ಎಂದು ಗಮನಸೆಳೆದರು.
ದರ ಏರಿಕೆಯ ಅಗತ್ಯವಿದೆ: ಜಯಕುಮಾರ್
ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಆರ್. ಮಾತನಾಡಿ, ಕೆಇಆರ್ ಸಿ ನಿಗದಿ ಮಾಡಿದ ಪ್ರಕಾರ ವಿದ್ಯುತ್ ಖರೀದಿ ದರ 3957 ಕೋ.ರೂ ನಿಗದಿ ಮಾಡಿತ್ತು. ಆದರೆ ಇದು 4477.95 ಕೋ.ರೂಗೆ ಏರಿಕೆ ಆಗಿತ್ತು. ಜತೆಗೆ ಕಾರ್ಯ, ಪಾಲನಾ ವೆಚ್ಚ, ಸವಕಳಿ ಅಕವಾಗಿ ಸುಮಾರು 83.12 ಕೋ.ರೂ ಕೊರತೆ ಎದುರಿಸುವಂತಾಗಿದೆ. ಇದರ ನಿಭಾವಣೆಗೆ 11 ರಿಂದ 12 ಪೈಸೆ ದರ ಏರಿಕೆ ಅಗತ್ಯ ಇದೆ ಎಂದರು.
ಸತ್ಯನಾರಾಯಣ ಉಡುಪ, ಜಗದೀಶ್ ಶರ್ಮ, ಕಾರ್ತಿಕ್, ಕಾರ್ಕಳ ಕಿಸಾನ್ ಸಂಘದ ಚಂದ್ರಹಾಸ ಶೆಟ್ಟಿ, ಶಿವಮೊಗ್ಗದ ಎನ್. ಕುಮಾರ್, ಕೆಸಿಸಿಐನ ಮುದಸ್ಸಿರ್, ಆಲ್ವಿನ್ ಡಿಸೋಜ ಮತ್ತಿತರರು ಮಾತನಾಡಿದರು.
ಆಯೋಗದ ಸದಸ್ಯ ಎಚ್.ಕೆ. ಜಗದೀಶ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಉಪಸ್ಥಿತರಿದ್ದರು.
ದರ ಎರಿಕೆಗೆ ಮೆಸ್ಕಾಂ ಪ್ರಸ್ತಾವನೆ:
ಮೆಸ್ಕಾಂ ಕಳೆದ ಅವಧಿಯಲ್ಲಿ ಅನುಭವಿಸಿದ 83.12 ಕೋ.ರೂ. ಆದಾಯ ಕೊರತೆಯನ್ನು ಸರಿದೂಗಿಸಲು ಪ್ರತೀ ಯುನಿಟ್ ಗೆ 11 ರಿಂದ 12 ಪೈಸೆ ದರ ಏರಿಕೆ ಮಾಡುವಂತೆ ಮೆಸ್ಕಾಂ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿತು.
496 ಲೈನ್ ಮ್ಯಾನ್‌ಗಳ ನೇಮಕ:
496 ಹೊಸ ಲೈನ್ ಮ್ಯಾನ್‌ಗಳ ನೇಮಕ ಮಾಡಲಾಗಿದೆ. ಎಲ್ಲರೂ ಕೂಡ ಹೊರ ಜಿಲ್ಲೆಯವರು. ಕರಾವಳಿ ಭಾಗದವರಿಗೆ ಲೈನ್ ಮ್ಯಾನ್ ತರಬೇತಿ ನೀಡಿದರೂ ಬರುತ್ತಿಲ್ಲ. ನೇಮಕವಾದವರಲ್ಲಿ 396 ಮಂದಿ ವರ್ಗಾವಣೆ ಬಯಸಿದ್ದಾರೆ. -ಜಯಕುಮಾರ್ ಆರ್., ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ