ಶಾಸಕರ ವಿದೇಶ ಪ್ರವಾಸ ಅಧ್ಯಯನಕ್ಕೆ ಹೋಗಿರಬಹುದು: ಪರಮೇಶ್ವರ್
ಮಂಗಳೂರು: ಯಾಕೆ ಹೋಗ್ತಿದ್ದಾರೆಂಬುದು ಗೊತ್ತಿಲ್ಲ. ಅವರವರ ಹಣದಲ್ಲಿ ಅವರು ಎಲ್ಲಿ ಬೇಕಾದರೂ ಹೋಗಬಹುದು. ಅಧ್ಯಯನ ಪ್ರವಾಸವೆಂದು ಹೋಗಿರಬಹುದು. ಆಸ್ಟ್ರೇಲಿಯಾ ಸೇರಿದಂತೆ ಎಲ್ಲಾ ಕಡೆ ಕೃಷಿಯಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ವಿಚಾರವಾಗಿ ಮಂಗಳೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬಜೆಟ್‌ನಲ್ಲಿ ಆ ಶಾಸಕರಿಗೆ ಕೆಲಸವೇನೂ ಇಲ್ಲ. ಬಜೆಟ್ ತಯಾರು ಮಾಡುವುದು ಸಿಎಂ ಹಾಗೂ ಹಣಕಾಸು ಇಲಾಖೆಯವರು. ಸಿಎಲ್‌ಪಿ ಸಭೆಯಲ್ಲಿ ಬಜೆಟ್ ಕುರಿತು ಅವರ ಅನಿಸಿಕೆಗಳನ್ನು ಹೇಳಿದ್ದಾರೆ. ಇದೆಲ್ಲವನ್ನೂ ಕ್ರೋಢೀಕರಿಸಿ ಬಜೆಟ್ ತಯಾರು ಮಾಡುತ್ತಾರೆ. ಶಾಸಕರು ಎಲ್ಲಿ ಬೇಕಾದರೆ ಹೋಗಗಿತ್ತಾರೆ, ಬರುತ್ತಾರೆ ನಮ್ಮಲ್ಲಿ ಯಾವ ಕದನವೂ ಇಲ್ಲ ಎಂದರು.
ಸಚಿವ ಹೆಚ್.ಸಿ ಮಹದೇವಪ್ಪ ದಲಿತ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹೆಚ್.ಸಿ ಮಹದೇವಪ್ಪ ಅವರು ಅವರ ಅಭಿಪ್ರಾಯ ಹೇಳಿದ್ದಾರೆ. ಮಹದೇವಪ್ಪ ಅವರು ಸಮರ್ಥರಿದ್ದಾರೆ. ಯಾವುದೇ ಜವಾಬ್ದಾರಿ ಕೊಟ್ಟರೂ ತೆಗೆದುಕೊಳ್ಳುವುದಕ್ಕೆ ಅವರಿಗೆ ಸಾಮರ್ಥ್ಯವಿದೆ. ಅದಕ್ಕೆ ಅವರು ಹೇಳಿದ್ದಾರೆ. ಜನಸಮುದಾಯದಲ್ಲಿ ಕೆಲವರು ಅವರವರ ನಾಯಕರು ಎಂದು ಆರಿಸಿಕೊಳ್ಳುತ್ತಾರೆ. ಜನ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಅದನ್ನು ತಪ್ಪು ಎಂದು ನಾವು ಹೇಳುವುದಕ್ಕೆ ಆಗಲ್ಲ. ಅವರ ಅಭಿಪ್ರಾಯ ಅದು. ನಮ್ಮಲ್ಲಿ ಒಂದು ವ್ಯವಸ್ಥೆ ಇದೆ, ಹೈಕಮಾಂಡ್ ಇದೆ, ಹೈಕಮಾಂಡ್ ಆ ಬಗ್ಗೆ ತೀರ್ಮಾನ ಮಾಡುತ್ತಾರೆ. ಯಾರೋ ಹತ್ತು ಜನ ನನ್ನ ಪರವಾಗಿ ಜೈಕಾರ ಹಾಕಿದರೆ ಆಗುವುದಿಲ್ಲ. ಆದರೆ ಹೈಕಮಾಂಡ್‌ನವರು ಅದನ್ನೆಲ್ಲಾ ನೋಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ.
ಈಗ ಆ ಸಂದರ್ಭ ಇದೆ ಅಂತಾ ನನಗೆ ಅನಿಸಲ್ಲ. ಈಗ ದಲಿತ ಸಿ.ಎಂ ಎಂಬ ಚರ್ಚೆಯೇ ಇಲ್ಲ. ನಾವು ಆಡಳಿತದ ಮೇಲೆ ನಿಗಾ ಇರಿಸಿದ್ದೇವೆ ಎಂದರು.
ಚಿಕ್ಕಮಗಳೂರಿನಲ್ಲಿ ಹಿಂದೂ ಮನೆ ಮೇಲೆ ಕಲ್ಲು ತೂರಾಟ ಘಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಚಿಕ್ಕಮಗಳೂರು ಘಟನೆ ಸಂಬಂಧ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಕಾನೂನು ಪ್ರಕಾರ ಪೊಲೀಸರು ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತಾರೆ. ಮನೆಯ ಹೆಣ್ಣುಮಗಳು ದಲಿತ ಸಮುದಾಯಕ್ಕೆ ಸೇರಿದವರು ಎಂದು ಗೊತ್ತಾಗಿದೆ. ಆ ಪ್ರಕಾರ ಪೊಲೀಸರು ಪಿಸಿಆರ್ ಆಕ್ಟ್ ಅಡಿ ಪ್ರಕರಣ ದಾಖಲಿಸುತ್ತಾರೆ ತಿಳಿಸಿದರು.
ಪ್ರಿಯಾಂಕ್ ಖರ್ಗೆಯವರ ಆರ್‌ಎಸ್‌ಎಸ್ ವಿರುದ್ಧದ ಹೇಳಿಕೆಯ ಬಗ್ಗೆ ಮಾತನಾಡಿ, ಅವರ ಹೇಳಿಕೆಗೆ ನನ್ನದೇನು ಒಪ್ಪಿಗೆ ಆಗಬೇಕು. ಅವರ ಅಭಿಪ್ರಾಯ ಅವರು ಹೇಳುತ್ತಾರೆ. ನನ್ನದೇ ಆಗಿರುವ ಅಭಿಪ್ರಾಯಗಳು ಇರುತ್ತವೆ. ಅದನ್ನು ನಾನು ಹೇಳುತ್ತೇನೆ. ಪ್ರಿಯಾಂಕ್ ಖರ್ಗೆಗೆ ಆರ್‌ಎಸ್‌ಎಸ್ ಬಗ್ಗೆ ಅವರದ್ದೇ ಆದ ಅಭಿಪ್ರಾಯ ಇದೆ. ಅದನ್ನು ಅವರು ಹೇಳಿದ್ದಾರೆ. ಅದಕ್ಕೆ ನನ್ನ ಅಭಿಪ್ರಾಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.