ನೂತನ ರಂಗ ಮಂಟಪ ಲೋಕಾರ್ಪಣೆ

ನೂತನ ರಂಗ ಮಂಟಪ ಲೋಕಾರ್ಪಣೆ


ಮಂಗಳೂರು: ನಗರದ ಪದವು ಬಿಕರ್ನಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 15 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿರುವ ನೂತನ ರಂಗ ಮಂಟಪ ಹಾಗೂ ಇಟರ್‌ಲಾಕ್ ಸೌಕರ್ಯವನ್ನು ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಸೋಮವಾರ ಲೋಕಾರ್ಪಣೆಗೊಳಿಸಿದರು. 

ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, "ಕಲಿತ ಸರ್ಕಾರಿ ಶಾಲೆಯ ಬಗ್ಗೆ ಹೆಮ್ಮೆ ಭಾವನೆ ಇದ್ದರೆ, ಆ ಶಿಕ್ಷಣ ಸಂಸ್ಥೆ ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಈ ಶಾಲೆ ಉದಾಹರಣೆ. ಐದಾರು ವರ್ಷಗಳಲ್ಲಿ ಶಾಲೆ ಅಭೂತಪೂರ್ವ ಬೆಳವಣಿಗೆ ಕಂಡಿದೆ. ಎರಡು ವಿವೇಕ ಕೊಠಡಿಗಳಿಗೆ 45 ಲಕ್ಷ ರೂ. ಅನುದಾನವೂ ಸೇರಿದಂತೆ 1 ಕೋಟಿ ರೂ.ಗೂ ಹೆಚ್ಚು ಅನುದಾನ ಶಾಲೆಗೆ ಬಂದಿದೆ" ಎಂದರು.


"ಪಾಲಿಕೆ ನಾಮ ನಿರ್ದೇಶಿತ ಸದಸ್ಯರಾಗಿದ್ದ ರಮೇಶ್ ಕಂಡೆಟ್ಟು ಅವರು ಒದಗಿಸಿದ 15 ಲಕ್ಷ ರೂ. ಅನುದಾನದಲ್ಲಿ ಶಾಲೆಯಲ್ಲಿ ಇಂಟರ್ ಲಾಕ್ ಅಳವಡಿಸಿ, ರಂಗಮಂಟಪ ನಿರ್ಮಿಸಲಾಗಿದೆ. ಇಲ್ಲಿ ಕಂಪ್ಯೂಟರ್ ತರಬೇತಿ ನೀಡಲು ಹಾಗೂ ಸುಸಜ್ಜಿತ ಪ್ರಯೋಗಾಲಯ ಸೌಕರ್ಯ ಒದಗಿಸಲು ಪ್ರಯತ್ನಿಸುತ್ತೇನೆ. ದೇಶದ ಶ್ರೇಷ್ಠ ವಿಜ್ಞಾನಿಗಳು, ಸಾಧಕರು ವ್ಯಾಸಂಗ ಮಾಡಿದ್ದು ಸರ್ಕಾರಿ ಶಾಲೆಗಳಲ್ಲಿ. ಗಮನಾರ್ಹ ಸಾಧನೆ ಮಾಡಿದ ತುಳುನಾಡಿನ ಗಣ್ಯರು ಕಲಿತದ್ದೂ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ. ಸರ್ಕಾರಿ ಶಾಲೆಗಳಲ್ಲಿರುವ ಸಮರ್ಪಣಾ ಭಾವದ ಅಧ್ಯಾಪಕರೇ ಇವರೆಲ್ಲರ ಸಾಧನೆಗೆ ಪ್ರೇರಣೆ" ಎಂದು ತಿಳಿಸಿದರು.

"ಮಕ್ಕಳಿಗೆ ಸುಂದರ ವಾತಾವರಣ ಕೊಡಬೇಕು ಅವಕಾಶ ಕಲ್ಪಿಸಬೇಕು ಎಂಬ ಕಾರಣಕ್ಕೆ ಈ ಭಾಗದ ಬಂಧುಮಿತ್ರರು ಹಳೆವಿದ್ಯಾರ್ಥಿಗಳು ದುಡಿಯುತ್ತಿದ್ದಾರೆ. ಈ ಶಾಲೆಯಲ್ಲಿ ವಿದ್ಯಾರ್ಥಿ ಸಂಖ್ಯೆ ವೃದ್ಧಿಯಾಗುತ್ತಿದೆ. ವಿದ್ಯಾರ್ಥಿಗಳು ಶಾಲೆಗೆ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ. ಇನ್ನಷ್ಟು ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಗೆ ಬರುವಂತೆ ಮಾಡುವ ಜವಾಬ್ದಾರಿ ಅಧ್ಯಾಪಕ ವೃಂದದ ಮೇಲಿದೆ" ಎಂದರು.

ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಮೇಶ್ ಕಂಡೆಟ್ಟು ಮಾತನಾಡಿದರು.

ಎಸ್ ಡಿಎಂಸಿ ಅಧ್ಯಕ್ಷೆ ಸಂಧ್ಯಾ ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸಂಜೀವ ಮರೋಳಿ, ನಿಕಟಪೂರ್ವ ಪಾಲಿಕೆ ಸದಸ್ಯೆ ಕಾವ್ಯಾ ನಟರಾಜ್, ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಶೆಟ್ಟಿ, ಮುಖ್ಯ ಶಿಕ್ಷಕಿ ರಾಜೀವಿ ಎಂ., ಪ್ರಮುಖರಾದ ಡಾ.ಗಣೇಶ್ ಕುಮಾರ್, ಪೋಷಕಿ ಸಬಿತಾ ಸಂತೋಷ್ ಕುಮಾರ್, ಪದವು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಕುಮುದಿನಿ ಭಾಗವಹಿಸಿದ್ದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶೈಲಜಾ ಸುರೇಶ್ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ ಶೆಟ್ಟಿ ವಂದಿಸಿದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಆಕರ್ಷಕ ಹುಲಿ ವೇಷ ಕುಣಿತ ಪ್ರದರ್ಶಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article