ಶಿಕ್ಷಣವೆಂದರೆ ವ್ಯಕ್ತಿತ್ವ ನಿರ್ಮಾಣ: ಶ್ರೀ ಜಿ.ಎಲ್. ತ್ರಿಪುರಾಂತಕ
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಹಾಗೂ ವಿಶ್ವವಿದ್ಯಾನಿಲಯ ಕಾಲೇಜು ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದರ ಕುರಿತ ಸರಣಿ ಉಪನ್ಯಾಸ-ವಿವೇಕವಾಣಿ-ಯ 52ನೇ ಕಾರ್ಯಕ್ರಮ ‘ವ್ಯಕ್ತಿತ್ವದಿಂದ ನಾಯಕತ್ವದತ್ತ ವಿವೇಕಾನಂದರ ಪಥ’ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸುತ್ತೂರು ಜೆಎಸ್‌ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್. ತ್ರಿಪುರಾಂತಕ, ಯುವಜನಾಂಗ ತಮ್ಮನ್ನು ತಾವು ಅರ್ಥ ಮಾಡಿಕೊಳ್ಳುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ದೇಶದ ಎಲ್ಲಾ ನಾಗರಿಕರಲ್ಲಿ ನಾಯಕತ್ವ ಗುಣ ಇದ್ದು ಅದನ್ನು ಜಾಗೃತಿಗೊಳಿಸುವ ಕಾರ್ಯ ನಡೆಯಬೇಕಿದೆ. ಇಂದಿನ ಯುವಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ವಿದ್ಯಾವಂತರೆಂದರೆ ಕೇವಲ ಅಕ್ಷರ ಜ್ಞಾನ ಪಡೆಯುವುದಲ್ಲ. ಬದಲಾಗಿ ಸಮಾಜದ ಏಳಿಗೆಗೆ ಶ್ರಮಿಸುವ ಸಾಮರ್ಥ್ಯವಿರುವ ನಾಯಕತ್ವ ಗುಣ ಬೆಳೆಸಿಕೊಳ್ಳುವುದೇ ಆಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ, ಸ್ವಾಮಿ ವಿವೇಕಾನಂದರ ಜೀವನ ಸಾಧನೆಯನ್ನು ಅರಿತುಕೊಂಡರೆ ಸಾಕು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗುವುದರೊಂದಿಗೆ ಉತ್ತಮ ನಾಯಕತ್ವ ಗುಣವೂ ಬೆಳೆಯುತ್ತದೆ. ಸಮಾಜದ ಬೆಳವಣಿಗೆಗಳಿಗೆ ಕಣ್ಣು, ಕಿವಿಯಾಗಿ ಅಧ್ಯಯನ ಮಾಡುವ ಮನೋಭಾವ ರೂಢಿಸಿಕೊಂಡು, ವೈಚಾರಿಕತೆ ಬೆಳೆಸಿಕೊಳ್ಳದಿದ್ದರೆ ಯುವಜನಾಂಗವನ್ನು ರಾಜಕಾರಣಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಚಂದ್ರು ಹೆಗ್ಡೆ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ವಿದ್ಯಾರ್ಥಿ ಪರಿಷತ್ ಉಪನಿರ್ದೇಶಕ ಪ್ರೊ. ಜಯವಂತ ನಾಯಕ್ ವಂದಿಸಿದರು.
ಇದೇ ವೇಳೆ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ. ಮಹದೇಶ ಕೆ.ಸಿ., ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿಗೌಡ ಎಸ್. ಮತ್ತಿತರರು ಉಪಸ್ಥಿತರಿದ್ದರು.
