ಆರೋಗ್ಯಕರ ಭವಿಷ್ಯಕ್ಕೆ ವಿದ್ಯಾರ್ಥಿಗಳಿಗೆ ಕ್ರೀಡೆ ಅತ್ಯಗತ್ಯ: ಡಾ. ಮನೋಜ್ ಕುಮಾರ್
ಅವರು ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2025-26ನೇ ಸಾಲಿನ ವಾರ್ಷಿಕ ಕ್ರಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುತ್ತವೆ. ನಿಯಮಿತವಾಗಿ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೇಹದ ತೂಕ ನಿಯಂತ್ರಣದಲ್ಲಿರುತ್ತದೆ, ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕ್ರೀಡೆಗಳು ಒತ್ತಡವನ್ನು ಕಡಿಮೆ ಮಾಡುತ್ತವೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿ, ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಸಹಸಂಯೋಜಕಿ ಡಾ. ಜ್ಯೋತಿಪ್ರಿಯ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದುಗ್ಗಪ್ಪ ಕಜೆಕಾರ್, ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಶುಭ ಕೆ.ಹೆಚ್. ಹಾಗೂ ಡಾ. ಅಪರ್ಣ ಆಳ್ವ ಎನ್., ಹಿರಿಯ ಉಪನ್ಯಾಸಕಿ ಪ್ರೊ. ವಸಂತಿ ಪಿ., ಬೋಧಕ-ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
ಧ್ವಜಾರೋಹಣ ಮತ್ತು ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನದೊಂದಿಗೆ ಕ್ರೀಡಾಕೂಟ ಆರಂಭಗೊಂಡಿತು. ತದನಂತರ ಕ್ರೀಡಾಕೂಟದ ಭಾಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಿದವು. ಬೋಧಕ-ಬೋಧಕೇತರರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಹೃನ್ಮ ಸ್ವಾಗತಿಸಿ, ಲತಿಕಾ ವಂದಿಸಿದರು. ಕಾವ್ಯ ಕಾರ್ಯಕ್ರಮ ನಿರೂಪಿಸಿದರು.