ಸದನದಲ್ಲಿ ತಪ್ಪು ಮಾಡಿದ ಶಾಸಕರಿಂದಲೇ ತಪ್ಪುಗಳ ಪುನರಾವರ್ತನೆ: ಸ್ಪೀಕರ್ ಯು.ಟಿ. ಖಾದರ್
ಮಂಗಳೂರು: ವಿಧಾನಸಭೆಯ 224 ಶಾಸಕರಲ್ಲಿ ಕೆಲವು ಶಾಸಕರ ವರ್ತನೆ ಮಾತ್ರ ಅಶಿಸ್ತಿನಿಂದ ಇರುತ್ತದೆ. ಬೇರೆ ಶಾಸಕರ ವರ್ತನೆ ಈ ರೀತಿ ಇರುವುದಿಲ್ಲ. ಸದನದಲ್ಲಿ ತಪ್ಪು ಮಾಡಿದವರಿಂದಲೇ ಮತ್ತೆ ಅಂತಹ ತಪ್ಪುಗಳು ಪುನರಾವರ್ತನೆ (ಹೆಬಿಚುವಲ್ ಒಫೆಂಡರ್ಸ್) ಆಗುತ್ತಿರುತ್ತವೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಶಿವಲಿಂಗೇಗೌಡರು ಸದನದಲ್ಲಿ ಬಳಕೆ ಮಾಡಿರುವ ಪದಗಳ ಕುರಿತು ಆಕ್ಷೇಪ ವ್ಯಕ್ತವಾಗಿರುವ ಬಗ್ಗೆ ಮಾಧ್ಯಮ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಸದನ ಎಂದರೆ ಕುಟುಂಬ ಇದ್ದಂತೆ. ಇಂತಹ ಚರ್ಚೆಗಳು ಹಿಂದೆಯೂ ಆಗಿವೆ. ಪ್ರೀತಿಯಿಂದ ಮಾತಾಡುವಾಗ, ಅಣ್ಣ ತಮ್ಮಂದಿರ ನಡುವಿನ ಚರ್ಚೆಯಂತೆ ಆಚೀಚೆ ಆಗಿರಬಹುದು.
ಕೆಲವು ಸಂದರ್ಭಗಳಲ್ಲಿ ಪ್ರತಿಕ್ರಿಯಿಸುವಾಗ ಭಾವನಾತ್ಮಕ ಮಾತುಗಳು ಬಂದು ಬಿಡುತ್ತವೆ. ಅದನ್ನು ಬಗೆಹರಿಸಿಕೊಂಡು ಹೋಗುವುದು ಸದನದ ಸಂಸ್ಕೃತಿ ಎಂದರು.
ಸದನವನ್ನು ಶಿಸ್ತಿನಿಂದ ನಡೆಸುವುದು ಸಭಾಧ್ಯಕ್ಷರ ಜವಾಬ್ದಾರಿ ಮಾತ್ರವಲ್ಲ. ಎಲ್ಲ ಸದಸ್ಯರ ಜವಾಬ್ದಾರಿಯಾಗಿದೆ. ಜನರು ಸಭೆಯ ಕಲಾಪ ವೀಕ್ಷಿಸುತ್ತಾರೆ, ನಮ್ಮನ್ನು ಗಮನಿಸುತ್ತಾರೆ ಎನ್ನುವ ಅರಿವು ಪ್ರತಿ ಶಾಸಕನಲ್ಲೂ ಇರಬೇಕು. ಶಾಸಕರು ತಮ್ಮ ಗೌರವ ಉಳಿಸಿಕೊಳ್ಳಬೇಕು.
ಎಲ್ಲವನ್ನೂ ಕಾನೂನು, ನಿಯಮಗಳಿಂದಲೇ ಜಾರಿಗೆ ತರಲು ಸಾಧ್ಯವಾಗದು. ಶಾಸಕರಿಗೆ ತಮ್ಮ ಹೊಣೆಗಾರಿಕೆಯ ಅರಿವು ಇರಬೇಕು. ಕಾನೂನು ಮತ್ತು ನಿಯಮದ ಬಗ್ಗೆ ತಿಳಿವಳಿಕೆ ಇರುವವರೇ ಶಾಸಕರಾಗಿ ಆಯ್ಕೆಯಾಗಿ ಬರುವವರು ಎಂದರು.
ಅಧಿವೇಶನದಲ್ಲಿ ಗೊಂದಲ ಉಂಟಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಅಧಿವೇಶನ ನಡೆಸುವುದು ಸರಿಯಲ್ಲ ಎಂದು ಸ್ಪೀಕರ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ವಿಚಾರಕ್ಕೆ ಸ್ಪಷ್ಟನೆ ನೀಡಿದ ಅವರು, ಮುಖ್ಯಮಂತ್ರಿ ಆ ರೀತಿಯ ಮಾತು ಆಡಿಲ್ಲ. ವಿಪಕ್ಷ ಸದಸ್ಯರು ಭಾಷಣಕ್ಕೆ ಅಡ್ಡಿಪಡಿಸಿದ ವೇಳೆ ‘ಸದಸ್ಯರು ಈ ರೀತಿ ವರ್ತಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ. ಸ್ಪೀಕರ್ ಪೀಠದಲ್ಲಿರುವವರು ಎಲ್ಲವನ್ನೂ ಸಮನ್ವಯದಿಂದ ನಡೆಸಬೇಕಾಗುತ್ತದೆ ಎಂದರು.