‘ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಸಿಗುತ್ತಿಲ್ಲ’: ಜಿಲ್ಲಾಧಿಕಾರಿ
ಮೂಡುಬಿದಿರೆ ತಾಲ್ಲೂಕಿನ ನಿಡ್ಡೋಡಿಯಲ್ಲಿ ಕೃಷಿಕರ ವಿರೋಧದ ನಡುವೆಯೂ ಕಂಪನಿಯವರು 440 ಕೆವಿ ವಿದ್ಯುತ್ ಮಾರ್ಗದ ಕಾಮಗಾರಿಯನ್ನು ಕೈಗೊಂಡು ಫಸಲು ನಾಶ ಮಾಡಿದ್ದಾರೆ ಎಂದು ದೂರಿದ ಮುಖಂಡರು ಯಾವ ಮುನ್ಸೂಚನೆಯೂ ಇಲ್ಲದೆ ಟವರ್ ಅಳವಡಿಸಲು ಕಂಪನಿ ಮುಂದಾಗುತ್ತಿದೆ. ಇದನ್ನು ಪ್ರತಿಭಟಿಸಿದ ರೈತರ ಮೇಲೆ ಪ್ರಕರಣ ದಾಖಲಾಗುತ್ತದೆ ಎಂದು ದೂರಿದರು.
ಇದಕ್ಕೆ ಸಮಜಾಯಿಷಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ, ನಿಡ್ಡೋಡಿಯಲ್ಲಿ ಆಲ್ಫೋನ್ಸ್ ಡಿಸೋಜ ಆತ್ಮಹತ್ಯೆಗೆ ಮುಂದಾಗಿದ್ದರು. ಕಾನೂನಿನ ಪ್ರಕಾರ ಇದು ಅಪರಾಧ. ಆದ್ದರಿಂದ ಅವರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದರು. 440 ಕೆವಿ ಮಾರ್ಗದ ಡಿಪಿಆರ್ ಆಗಿ 9 ವರ್ಷಗಳು ಕಳೆದಿವೆ. ಶೇ 90ರಷ್ಟು ಕಾಮಗಾರಿ ಆಗಿದೆ. ಇಂಥ ಸಂದರ್ಭದಲ್ಲಿ ಆಕ್ಷೇಪ ಎತ್ತುವುದು ಸರಿಯಲ್ಲ. ಪರಿಹಾರಕ್ಕೆ ಸಂಬಂಧಿಸಿ ಲೋಪಗಳಿದ್ದರೆ ತಕ್ಷಣ ಸರಿಮಾಡಿಕೊಡಲಾಗುವುದು. ಪರಿಹಾರದ ಮೊತ್ತ ಹೆಚ್ಚಳ ಮಾಡುವ ನಿರ್ಧಾರ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಅಧಿಕಾರವಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.
ಇಬ್ಬರ ಮಾತು ಕೇಳಿ ಕೆರಳಿದ ಮುಖಂಡರು ಬೆಳೆದು ನಿಂತ ಫಸಲಿನ ಮೇಲೆ ಕಂಬಿಗಳನ್ನು ಎಳೆದು ನಾಶ ಮಾಡಿದರೆ ಯಾರಿಗೆ ತಾನೇ ಹೊಟ್ಟೆ ಉರಿಯುವುದಿಲ್ಲ. 21 ಗ್ರಾಮದ ರೈತರ ಪ್ರತಿಭಟನೆಯ ನಡುವೆಯೂ ದಬ್ಬಾಳಿಕೆ ಮಾಡಲು ಕಂಪನಿಯವರಿಗೆ ಧೈರ್ಯ ಎಲ್ಲಿಂದ ಬಂತು ಎಂದು ಕೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಯಾದವ ಶೆಟ್ಟಿ ಮಾತನಾಡಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುವ ಹಕ್ಕಿಗೆ ಧಕ್ಕೆ ತರಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ಗಳು ಶ್ರೀಮಂತರಿಗೆ ಮಾತ್ರ ಸಾಲ ನೀಡುತ್ತಿವೆ. ಈ ಬಗ್ಗೆ ಸರ್ವೆ ಆಗಬೇಕು ಎಂದು ಒತ್ತಾಯಿಸಿದರು.
ಸಾಲಮನ್ನಾ: 14 ಕೋಟಿ ವಿತರಣೆ:
ಬೆಳೆ ಸಾಲಮನ್ನಾ ಯೋಜನೆಯಡಿ 1750 ರೈತರಿಗೆ 14 ಕೋಟಿ ವಿತರಣೆ ಆಗಿದ್ದು 540 ರೈತರಿಗೆ 5.60 ಕೋಟಿ ಕೊಡುವುದು ಉಳಿದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು. ಸಾಲಮನ್ನಾದ ಸಬ್ಸಿಡಿಗೆ ಸಂಬಂಧಿಸಿದ ರಾಜ್ಯದ ಪಾಲು ಸಮರ್ಪಕವಾಗಿ ಬರುತ್ತಿದ್ದು ನಬಾರ್ಡ್ ಮೂಲಕ ಬರಬೇಕಾದ ಮೊತ್ತ ಸಿಗುತ್ತಿಲ್ಲ ಎಂದು ಮುಖಂಡರು ದೂರಿದರು. ಆದಾಯ ತೆರಿಗೆ ಕಟ್ಟುತ್ತಾರೆ ಎಂಬ ಕಾರಣಕ್ಕೆ ಪಿಎಂ ರೈತ ಯೋಜನೆಯಲ್ಲಿರುವ ಸಣ್ಣ ಮತ್ತು ಅತಿಸಣ್ಣ ರೈತರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದರು.
ಉಪ ಪೊಲೀಸ್ ಆಯುಕ್ತ ಮಿಥುನ್ ಎಚ್.ಎನ್, ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್, ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್, ಪ್ರಮುಖರಾದ ಆಲ್ವಿನ್ ಮೆನೇಜಸ್, ರೂಪೇಶ್ ರೈ, ಸುರೇಶ್ ಭಟ್ ಕೊಳಂಬೆ, ಸ್ಟೀವನ್ ಡಿಸೋಜ, ಶಾಹುಲ್ ಹಮೀದ್ ಉಪ್ಪಿನಂಗಡಿ ಪಾಲ್ಗೊಂಡಿದ್ದರು.