ಕೆಎಂಎಫ್: 1 ರೂ. ಹೆಚ್ಚುವರಿ ಪ್ರೋತ್ಸಾಹ ಧನ
ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ತನ್ನ ವ್ಯಾಪ್ತಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಲು ಹಾಕುವ ಸದಸ್ಯರಿಗೆ ಪ್ರತಿ ಲೀಟರ್ ಹಾಲಿಗೆ 1 ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಿದೆ. 21-2-2026 ರಿಂದ 31-5-2026ರ ವರೆಗೆ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿಗೆ 1 ಹೆಚ್ಚುವರಿ ಪ್ರೋತ್ಸಾಹಧನ ನೀಡಲು ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇದರಿಂದಾಗಿ ಒಕ್ಕೂಟವು ನಿತ್ಯ ಅಂದಾಜು 4.1 ಲಕ್ಷ ಹೆಚ್ಚುವರಿ ಮೊತ್ತವನ್ನು ಹಾಗೂ ಈ ಅವಧಿಗೆ ಒಟ್ಟು ಅಂದಾಜು ೪ ಕೋಟಿ ವಿಶೇಷ ಪ್ರೋತ್ಸಾಹಧನವನ್ನು ರೈತರಿಗೆ ಪಾವತಿಸಲಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.
ಉಭಯ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ಹಸಿರು ಹುಲ್ಲು, ಒಣ ಹುಲ್ಲು ಕೊರತೆ ಇರುತ್ತದೆ. ರಸಮೇವು (ಸೈಲೇಜ್)ಗೆ ಅಧಿಕ ಬೆಲೆ ನೀಡಬೇಕಾಗುತ್ತದೆ. ಹೀಗಾಗಿ ಹೈನುಗಾರಿಕೆ ಮಾಡುತ್ತಿರುವವರಿಗೆ ನೆರವಾಗಲು ಈ ಯೋಜನೆ ಜಾರಿಗೊಳಿಸಲಾಗಿದೆ.
ಪ್ರತಿ ಲೀಟರ್ ಗುಣಮಟ್ಟದ ಹಾಲಿಗೆ ಪ್ರಸ್ತುತ ಒಕ್ಕೂಟವು ನೀಡುತ್ತಿರುವ 1.50 ಪ್ರೋತ್ಸಾಹಧನ ಸೇರಿ 40.76 ದರ ನೀಡಲಾಗುತ್ತಿದೆ. ಈಗ ಹೆಚ್ಚುವರಿ 1 ಪ್ರೋತ್ಸಾಹಧನ ಸೇರಿ ಗುಣಮಟ್ಟದ ಹಾಲಿಗೆ 41.76 ನೀಡಲಾಗುವುದು. ರೈತರು ಉತ್ತಮ ಗುಣಮಟ್ಟದ ಅಧಿಕ ಹಾಲನ್ನು ಉತ್ಪಾದಿಸಿ ಅದನ್ನು ಒಕ್ಕೂಟಕ್ಕೆ ನೀಡುವ ಮೂಲಕ ಪ್ರೋತ್ಸಾಹಧನ ಹೆಚ್ಚಳದ ಪ್ರಯೋಜನ ಪಡೆಯಬೇಕು ಎಂದು ಅವರು ಕೋರಿದ್ದಾರೆ.