ಬಿಎಸ್‌ಎನ್‌ಎಲ್ ತಾಮ್ರದ ತಂತಿ ಕಳವು: ಬಿಎಸ್‌ಎನ್‌ಎಲ್ ಸಿಬಂದಿ ಸೇರಿ ಮೂವರ ಸೆರೆ
ಪಾಂಡೇಶ್ವರ ಬಿಎಸ್‌ಎನ್‌ಎಲ್ ಕಂಪನಿಯ ಕಚೇರಿಯಲ್ಲಿ ಟೆಲಿಕಾಂ ಟೆಕ್ನೀಶಿಯನ್ ಆಗಿರುವ ಕೆಕೆ ಚಾಮಿ (55), ಕಚೇರಿಯಲ್ಲಿ ಸಹಾಯಕ ಅಧೀಕ್ಷಕ ಹುದ್ದೆಯಲ್ಲಿದ್ದ ತನ್ವೀರ್ ಪಾಷಾ (48) ಮತ್ತು ಕೇಬಲ್ ಆಪರೇಟರ್ ಗುತ್ತಿಗೆ ನೌಕರನಾಗಿರುವ ಮಂಜುನಾಥ್ (35) ಎಂಬವರನ್ನು ಬಂಧಿಸಲಾಗಿದೆ. ಮಂಜುನಾಥ್ ಬಿಎಸ್‌ಎನ್‌ಎಲ್‌ನಲ್ಲಿ ಗುತ್ತಿಗೆ ನೌಕರನಾಗಿದ್ದು, ಎಲ್ ಅಂಡ್ ಟಿ ಕಂಪನಿಯಲ್ಲು ಕೇಬಲ್ ಜಾಯಿಂಟರ್ ಆಗಿ ಕೆಲಸ ಮಾಡುತ್ತಿದ್ದ.
ಹಿಂದೆ ಬಿಎಸ್‌ಎನ್‌ಎಲ್ ಲ್ಯಾಂಡ್ ಫೋನ್ ಬಳಕೆಯಲ್ಲಿದ್ದಾಗ ಕೇಬಲನ್ನು ಭೂಗತವಾಗಿ ಹಾಕಲಾಗಿತ್ತು. ಪ್ರತಿ ಬಳಕೆದಾರನಿಗೂ ಪ್ರತ್ಯೇಕ ತಾಮ್ರದ ಕೇಬಲ್ ತಂತಿಯನ್ನು ಒಂದೇ ಪೈಪ್ ಒಳಗಡೆ ಹಾಕಿ ಸಂಪರ್ಕ ನೀಡಲಾಗುತ್ತಿತ್ತು. ಆದರೆ ಈಗ ಮೊಬೈಲ್ ಇನ್ನಿತರ ಖಾಸಗಿ ಕಂಪನಿಗಳ ದೂರವಾಣಿ ಚಾಲ್ತಿಗೆ ಬಂದಿರುವುದರಿಂದ ಹಳೆ ಮಾದರಿಯ ಲ್ಯಾಂಡ್ ಫೋನ್ ಅಗತ್ಯವಿಲ್ಲದೆ ಅದರ ಬಳಕೆ ಇಲ್ಲವಾಗಿದೆ.
ಇದರ ಬಗ್ಗೆ ಮಾಹಿತಿಯಿದ್ದ ಬಿಎಸ್‌ಎನ್‌ಎಲ್ ಟೆಕ್ನೀಶಿಯನ್ ಕೆಕೆ ಚಾಮಿ ಮತ್ತು ಕಚೇರಿ ಅಧೀಕ್ಷಕ ತನ್ವೀರ್ ಪಾಷಾ, ಮಂಜುನಾಥ್ ಜೊತೆಗೂಡಿ ಹಳೆ ಕಾಲದ ತಾಮ್ರದ ಕೇಬಲನ್ನು ತೆಗೆದು ಮಾರಾಟ ಮಾಡುತ್ತಿದ್ದರು. ನೆಹರು ಮೈದಾನ ಆಸುಪಾಸಿನಲ್ಲಿ ಸೇರಿದಂತೆ ಹಲವೆಡೆ ಹಾಕಿದ್ದ ಕೇಬಲನ್ನು ಒಂದೂವರೆ ವರ್ಷಗಳಿಂದ ತೆಗೆದು ಮಾರಾಟ ಮಾಡಿದ್ದು, ಇದರ ಈಗಿನ ಮಾರುಕಟ್ಟೆ ಮೌಲ್ಯ 70 ಲಕ್ಷ ಆಗಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಪಾಂಡೇಶ್ವರ ಬಿಎಸ್‌ಎನ್‌ಎಲ್ ಕಚೇರಿಯ ಜೂನಿಯರ್ ಟೆಲಿಕಾಂ ಆಫೀಸರ್ ವಿನೋದ್ ಶೇಖರ್ ನಾಯ್ಕ್ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಅವರ ಬಳಿಯಿದ್ದ 45 ಕೇಜಿ ತಾಮ್ರದ ಕೇಬಲ್ ಮತ್ತು ಕೇಬಲ್ ಮಾರಾಟ ಮಾಡಿ ಬಂದಿದ್ದ 10 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.