ಅಂತರರಾಜ್ಯ ಯುವ ವಿನಿಮಯ ಕಾರ್ಯಕ್ರಮ ಸಮಾರೋಪ

ಅಂತರರಾಜ್ಯ ಯುವ ವಿನಿಮಯ ಕಾರ್ಯಕ್ರಮ ಸಮಾರೋಪ


ಮಂಗಳೂರು: ರಾಷ್ಟ್ರ್ರೀಯ ಏಕೀಕರಣ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ 5 ದಿನಗಳ ಅಂತರರಾಜ್ಯ ಯುವ ವಿನಿಮಯ ಕಾರ್ಯಕ್ರಮದ  ಸಮಾರೋಪ ಶಕ್ತಿನಗರದ ಕಲಾಂಗಣದಲ್ಲಿ ಇತ್ತೀಚಿಗೆ ನಡೆಯಿತು.

ಕೇಂದ್ರ ಯುವ ವ್ಯವಹಾರಗಳ ಸಚಿವಾಲಯದ ’ಮೇರಾ ಯುವ ಭಾರತ್’ (ಮೈ ಭಾರತ್) ದಕ್ಷಿಣ ಕನ್ನಡ, ಮಂಗಳೂರು ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಘಟಕ ಮತ್ತು ಮಾಂಡ್ ಶೋಭನ್ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತೆಲಂಗಾಣದ 5 ಜಿಲ್ಲೆಗಳಿಂದ ಬಂದಿದ್ದ 35 ಯುವ ನಾಯಕರು ಮತ್ತು ಇಬ್ಬರು ಮಾರ್ಗದರ್ಶಕರು ಸೇರಿದಂತೆ ಒಟ್ಟು 37 ಸದಸ್ಯರ ನಿಯೋಗವು ಈ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕರ್ನಾಟಕದ ಕರಾವಳಿಯ ಶ್ರೀಮಂತ ಪರಂಪರೆಯನ್ನು ಮನಸಾರೆ ಆಸ್ವಾದಿಸಿತು.

ತುಳುನಾಡಿನ ಪರಂಪರೆಯ ದರ್ಶನ

ತೆಲಂಗಾಣದ ಯುವಜನರು ನವ ಮಂಗಳೂರು ಬಂದರು ಪ್ರಾಧಿಕಾರ, ಐತಿಹಾಸಿಕ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ, ಕಟೀಲು ಕ್ಷೇತ್ರ ಮತ್ತು ರಾಣಿ ಅಬ್ಬಕ್ಕ ಮ್ಯೂಸಿಯಂ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು. ಪಣಂಬೂರು ಬೀಚ್ನ ಸೌಂದರ್ಯವನ್ನು ಸವಿಯುವುದರ ಜೊತೆಗೆ, ತುಳುನಾಡಿನ ಸಾಂಸ್ಕೃತಿಕ ಜೀವನಾಡಿಯಾದ ಯಕ್ಷಗಾನ, ಭೂತಕೋಲ ಮತ್ತು ಕಂಬಳದಂತಹ ಕಲೆಗಳ ನೇರ ಪ್ರದರ್ಶನವನ್ನು ವೀಕ್ಷಿಸಿದರು. ಅಲ್ಲದೆ, ಸ್ಥಳೀಯ ಯುವಕ ಸಂಘಗಳು ಮತ್ತು ಮಹಿಳಾ ಮಂಡಲಗಳೊಂದಿಗೆ ಸಂವಾದ ನಡೆಸಿ ಉಭಯ ರಾಜ್ಯಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಿದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಅವರು ಮಾತನಾಡಿ, "ದೇಶ ಕಟ್ಟುವ ಕೆಲಸದಲ್ಲಿ ಇಂತಹ ಯುವ ವಿನಿಮಯ ಕಾರ್ಯಕ್ರಮಗಳು ಬೆನ್ನೆಲುಬಾಗಿ ನಿಲ್ಲುತ್ತವೆ. ಇದು ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುತ್ತದೆ," ಎಂದರು.    

ಸಮಾರೋಪದ ಸಂಜೆ ಸಾಂಸ್ಕೃತಿಕ ಅನಾವರಣಗೊಂಡಿತು. ಬೆಸೆಂಟ್ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳು  ಪ್ರದರ್ಶಿಸಿದ ನೃತ್ಯಗಳು, ಕಲಾಂಗಣದ ಕಲಾವಿದರಿಂದ ಕೊಂಕಣಿ ಗೀತೆಗಳು ಮತ್ತು ತೆಲಂಗಾಣದ ಪ್ರತಿನಿಧಿಗಳಿಂದ ಸಾಂಪ್ರದಾಯಿಕ ಕಲಾ ಪ್ರದರ್ಶನಗಳು ಪ್ರೇಕ್ಷಕರ ಮನ ಗೆದ್ದವು.

ತೆಲಂಗಾಣದ ಎಲ್ಲಾ 37 ಪ್ರತಿನಿಧಿಗಳಿಗೆ ನೆನಪಿನ ಕಾಣಿಕೆಯಾಗಿ ಪ್ರಮಾಣಪತ್ರ, ಸ್ಮರಣಿಕೆ ಮತ್ತು ಫೊಟೋ ಫ್ರೇಮ್ಗಳನ್ನು ವಿತರಿಸಲಾಯಿತು. ಶಿಕ್ಷಣ, ಸಂಸ್ಕೃತಿ ಮತ್ತು ಸ್ನೇಹದ ಸಮ್ಮಿಲನದಂತಿದ್ದ ಈ ಕಾರ್ಯಕ್ರಮವು ಯುವಜನರಲ್ಲಿ ಹೊಸ ಹುರುಪು ತುಂಬುವಲ್ಲಿ ಯಶಸ್ವಿಯಾಯಿತು.

ಮೈ ಭಾರತ್ ದಕ್ಷಿಣ ಕನ್ನಡದ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಂಗಳೂರು ವಿವಿಯ ಎನ್‌ಎಸ್‌ಎಸ್ ಸಂಯೋಜಕ ಡಾ. ಶೇಷಪ್ಪ ಅಮೀನ್, ಮಾಂಡ್ ಶೋಭನ್ ಅಧ್ಯಕ್ಷ ಲೂವಿ ಪಿಂಟೊ, ಜಗದೀಶ್ ಕೆ., ಮತ್ತು ಶ್ರೀಕಾಂತ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article