ಟಿಪ್ಪರ್, ಪಿಕಪ್‌ನಲ್ಲಿ ಮಕ್ಕಳ ಅಧ್ಯಯನ ಪ್ರವಾಸ: ವ್ಯಾಪಕ ಆಕ್ರೋಶ
ಇತ್ತೀಚೆಗಷ್ಟೇ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಳೆಂಜದ ಪ್ರಭಾರ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಫೆ.10ರಂದು ಬೆಳಿಗ್ಗೆ ಶಾಲಾ ಮಕ್ಕಳನ್ನು ಪಿಕಪ್ ಹಾಗೂ ಟಿಪ್ಪರ್ ವಾಹನದಲ್ಲಿ ಜೇನು ಕೃಷಿ ಅಧ್ಯಯನದ ಹೆಸರಿನಲ್ಲಿ ಸ್ಥಳೀಯ ನಾಲ್ಕೂರು ಬಳಿಯ ಅನಿಲ್ ಫಾರ್ಮ್ಗೆ ಕರೆದುಕೊಂಡು ಹೋಗಿ ಬಳಿಕ ವಾಪಸ್ ಶಾಲೆಗೆ ಕರೆದುಕೊಂಡು ಬಂದಿದ್ದಾರೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳ ಪೋಷಕರು, ಪಿಕಪ್ ಮತ್ತು ಟಿಪ್ಪರ್ ಸೇರಿದಂತೆ ಸರಕು ಸಾಗಣೆ ವಾಹನಗಳಲ್ಲಿ ಕೂಲಿ ಕಾರ್ಮಿಕರನ್ನೂ ಕರೆದುಕೊಂಡು ಹೋಗಲು ಮೋಟಾರು ವಾಹನ ಕಾಯ್ದೆಯಡಿ ಅವಕಾಶವಿಲ್ಲದಿರುವಾಗ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿರುವುದು ಏಕೆ? ಅಲ್ಲದೆ, ಈ ರೀತಿ ಕರೆದುಕೊಂಡು ಹೋಗಿ ಶಾಲಾ ಮಕ್ಕಳಿಗೆ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ? ಎಂದು ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಲಾ ಮಕ್ಕಳನ್ನು ಪಿಕಪ್ ಮತ್ತು ಟಿಪ್ಪರ್‌ನಲ್ಲಿ ಕರೆದುಕೊಂಡು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.