ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳ ಕುಂದು ಕೊರತೆಗಳ ಅಹವಾಲು ಸಭೆ

ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳ ಕುಂದು ಕೊರತೆಗಳ ಅಹವಾಲು ಸಭೆ


ಮಂಗಳೂರು: ದ.ಕ.ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಕುಂದು ಕೊರತೆಗಳ ಅಹವಾಲು ಮತ್ತು ಸ್ಪಂದನಾ ಸಭೆಯು ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇಗೌಡರ ಅಧ್ಯಕ್ಷತೆಯಲ್ಲಿ ಶುಕ್ರವಾರ ದ.ಕ.ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭ ಶಿಕ್ಷಕರ ಸಂಘಟನೆಗಳು ಅನೇಕ ಪ್ರಮುಖ ವಿಚಾರಗಳ ಬಗ್ಗೆ ಸದಸ್ಯರ ಗಮನ ಸೆಳೆದರು. ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಪಡಿಸುವ ಈ ಅವಧಿಯಲ್ಲಿ ಶಿಕ್ಷಕರಿಗೆ ಚುನಾವಣೆಯ ಬಿಎಲ್‌ಒ ಜವಾಬ್ದಾರಿ ನೀಡಿರುವುದು ಸರಿಯಲ್ಲ. ಇದರಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಮೇಲೆ ನೇರ ಪರಿಣಾಮ ಬೀಳುವ ಸಾಧ್ಯತೆ ಇದೆ. 400 ಮಕ್ಕಳಿರುವ ಕೆಲವು ಶಾಲೆಗಳಲ್ಲಿ ಒಂದೆರಡು ಶಿಕ್ಷಕರು ಇದ್ದಾಗ ಅವರಿಗೂ ಬಿಎಲ್‌ಒ ಜವಾಬ್ದಾರಿ ನೀಡಿರುವುದರಿಂದ ಶಿಕ್ಷಣದ ಮೇಲೆ ಬಹುದೊಡ್ಡ ಪರಿಣಾಮ ಬೀಳಲಿದೆ ಎಂದು ಶಿಕ್ಷಕರ ಹಲವು ಸಂಘಟನೆಗಳ ಪ್ರಮುಖರು ಶಿಕ್ಷಣ ಇಲಾಖೆಯ ಗಮನಸೆಳೆದರು. 

ಚುನಾವಣೆ ಕೆಲಸ ತುಂಬಾ ಮುಖ್ಯ. ಜೊತೆಗೆ ಮಕ್ಕಳ ಶಿಕ್ಷಣವೂ ಮುಖ್ಯ. ಹಾಗಾಗಿ ಬಿಎಲ್‌ಒ ಕೆಲಸಗಳಿಗೆ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯವರನ್ನು ಬಿಟ್ಟು ಉಳಿದ ಇಲಾಖೆಯಲ್ಲಿ ಇರುವವರನ್ನು ಬಳಸಿಕೊಂಡರೆ ಉತ್ತಮ ಭೋಜೇಗೌಡ ಹೇಳಿದರು. 

ಶಿಕ್ಷಕ ತ್ಯಾಗಂ ಹರೇಕಳ ಮಾತನಾಡಿ ದೈಹಿಕ ಶಿಕ್ಷಕರನ್ನು ಕೂಡ ಬಿಎಲ್‌ಒಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಅದೂ ಕೂಡ ತಾವಿರುವ ಪ್ರದೇಶದ ಬದಲು ಇತರ ಪ್ರದೇಶವನ್ನು ಗೊತ್ತುಪಡಿಸಲಾಗಿದೆ. ಇದರಿಂದ ಬಹಳಷ್ಟು ತೊಂದರೆ ಆಗುತ್ತಿದೆ ಎಂದರು. 

ಪ್ರಾಂಶುಪಾಲ ವಿಠಲ್ ಕೆ. ಮಾತನಾಡಿ ವಿದ್ಯಾರ್ಥಿಗಳ ಅನುಗುಣಕ್ಕೆ ಉಪನ್ಯಾಸಕರ ನೇಮಕ ಮಾಡುವುದು ಸರಿಯಾದ ಕ್ರಮವಲ್ಲ. ಕಡಿಮೆ ವಿದ್ಯಾರ್ಥಿಗಳು ಇರುವ ಕಾಲೇಜುಗಳಿಗೆ ಉಪನ್ಯಾಸಕ/ಪ್ರಾಂಶುಪಾಲರನ್ನು ನೇಮಿಸುವುದೇ ಇಲ್ಲ. ಇದರಿಂದ ಸೀಮಿತ ಸಂಖ್ಯೆಯಲ್ಲಿ ಮಕ್ಕಳಿರುವ ಶಾಲೆಯಲ್ಲಿ ಅನ್ಯಾಯವಾಗುತ್ತದೆ ಎಂದರು. 

ಅಪರ ಜಿಲ್ಲಾಧಿಕಾರಿ ರಾಜು ಕೆ. ಮಾತನಾಡಿ, ಈ ಹಿಂದೆ ಚುನಾವಣೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಬಿಎಲ್‌ಒ ಕೆಲಸಗಳಿಗೆ ಬಳಸಲಾಗುತ್ತಿತ್ತು. ಈ ಬಾರಿ ಶಿಕ್ಷಕರನ್ನು ಬಳಸಿಕೊಳ್ಳುವಂತೆ ಆಯೋಗದ ಸೂಚನೆ ಇದೆ. ಹೀಗಾಗಿ ಇದರಲ್ಲಿ ನಮಗೆ ಏನೂ ಮಾಡುವಂತಿಲ್ಲ. ಅನಾರೋಗ್ಯದ ಸಮಸ್ಯೆ ಇರುವ ಮಂದಿಗೆ ವಿನಾಯಿತಿ ನೀಡುವ ಕೆಲಸವನ್ನು ಮಾಡಬಹುದಾಗಿದೆ ಎಂದರು. 

ಫೆ.16ಕ್ಕೆ ಶಾಲಾ ಮಾನ್ಯತೆ ನವೀಕರಣ ಸಭೆ:

ರಾಜ್ಯಾದ್ಯಂತ ಶಾಲಾ ಮಾನ್ಯತಾ ನವೀಕರಣ ಸಮಸ್ಯೆ ಇದೆ. ಅದರ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಫೆ.16ರಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಸಹಿತ ಇಲಾಖೆಯ ಅಧಿಕಾರಿಗಳ ಜತೆಗೆ ಸಭೆ ನಡೆಯಲಿದೆ. ಶಾಲೆಗಳ ಮಾನ್ಯತಾ ನವೀಕರಣಕ್ಕೆ ಸಂಬಂಧಿಸಿ ಜಮೀನಿನ ಕನ್ವರ್ಶನ್ ವಿಚಾರವನ್ನು ಕೈ ಬಿಟ್ಟಾಗ ಸಾಕಷ್ಟು ಸಮಸ್ಯೆಗಳು ಬಗೆಹರಿ ಯುತ್ತದೆ. ನವೀಕರಣ ವಿಚಾರ ಭ್ರಷ್ಟಾಚಾರದ ದಂಧೆಯಾಗುತ್ತಿದೆ. ಎಂದು ಎಸ್.ಎಲ್. ಭೋಜೇಗೌಡ ಹೇಳಿದರು. 

ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ದ.ಕ.ಜಿ.ಪಂ. ಸಿಇಒ ನರವಡೆ ವಿನಾಯಕ್ ಕರ್ಬಾರಿ, ಡಿಡಿಪಿಐ ಶಶಿಧರ್, ಡಿಡಿಪಿಯು ರಾಜೇಶ್ವರಿ, ಡಯೆಟ್ನ ಸದಾನಂದ ಪೂಂಜ, ಶಿಕ್ಷಣ ಕ್ಷೇತ್ರದ ಪ್ರಮುಖರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ನವೀನ್ ಶೆಟ್ಟಿ, ಮಂಜುನಾಥ ರೇವಣ್ಕರ್, ರಿಯಾಝ್, ಶಿವಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article