ಮಂಗಳೂರಿನಲ್ಲಿ ಸಮುದ್ರ ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಸಂಸದ ಕ್ಯಾ. ಚೌಟ ಒತ್ತಾಯ
ಮಂಗಳೂರು: ಮೀನುಗಾರಿಕೆಯೇ ಪ್ರಮುಖ ಉದ್ಯಮವಾಗಿರುವ ದಕ್ಷಿಣ ಕನ್ನಡದಲ್ಲಿ ಗುಣಮಟ್ಟದ ಮೀನು ಉತ್ಪಾದನೆ ಕೊರತೆ ನೀಗಿಸಲು ಸಮುದ್ರ ಮೀನು ಮರಿ ಉತ್ಪಾದನಾಕೇಂದ್ರವನ್ನು ಸ್ಥಾಪಿಸಬೇಕೆಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಆಗ್ರಹಿಸಿದ್ದಾರೆ.
ಲೋಕಸಭೆಯಲ್ಲಿ ನಿಯಮ 377ರಡಿ ಈ ವಿಷಯ ಪ್ರಸ್ತಾಪಿಸಿರುವ ಸಂಸದರು, ದಕ್ಷಿಣ ಕನ್ನಡವು ಕರ್ನಾಟಕದಲ್ಲೇ ಮೀನುಗಾರಿಕೆಯಲ್ಲಿ ಪ್ರಮುಖ ಹಬ್ ಆಗಿದ್ದು, ಈ ಭಾಗದಲ್ಲಿ ಸಾವಿರಾರು ಜನರು ಮೀನುಗಾರಿಕೆಯನ್ನೇ ಜೀವನೋಪಾಯವಾಗಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಪಂಜರ ಮೀನುಗಾರಿಕೆಗೆ ಉತ್ತೇಜನ ನೀಡಲು ಈ ಹ್ಯಾಚರಿ ಸ್ಥಾಪನೆ ಅತ್ಯಗತ್ಯವಾಗಿದೆ. ಆದರೆ, ಗುಣಮಟ್ಟದ ಸಮುದ್ರ ಮೀನು ಮರಿಗಳ ಕೊರತೆಯಿಂದ ಪಶ್ಚಿಮ ಕರಾವಳಿಯ ಸಮುದ್ರ ಮೀನು ಕೃಷಿ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಮೀನು ಮರಿಗಳನ್ನು ಪೂರ್ವ ಕರಾವಳಿಯಿಂದ ತರಬೇಕಾಗುತ್ತಿದೆ. ಇದರಿಂದ ವೆಚ್ಚ ಹೆಚ್ಚಳ, ಸಾಗಣೆ ಸಮಸ್ಯೆಗಳು ಮತ್ತು ಜೈವಿಕ ಭದ್ರತಾ ಅಪಾಯದಂಥ ಸವಾಲುಗಳು ಕೂಡ ಎದುರಾಗುತ್ತಿವೆ. ಹೀಗಾಗಿ, ಮಂಗಳೂರಿನಲ್ಲಿ ಸಮುದ್ರ ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪಿಸುವ ಅಗತ್ಯತೆಯಿದೆ ಎಂದು ಕ್ಯಾ. ಚೌಟ ಅವರು ಸದನದ ಗಮನಸೆಳೆದರು.
ICAR-ಸೆಂಟ್ರಲ್ ಮರೈನ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸಿದ್ಧಪಡಿಸಿರುವ ವರದಿಯನ್ನು ಉಲ್ಲೇಖಿಸಿದ ಸಂಸದರು, ಈ ಮೀನು ಮರಿ ಉತ್ಪಾದನಾ ಕೇಂದ್ರದಲ್ಲಿ ವರ್ಷಕ್ಕೆ ವಿವಿಧ ಪ್ರಬೇಧಗಳ 10ರಿಂದ 20 ಲಕ್ಷ ಮೀನು ಮರಿಗಳನ್ನು ಉತ್ಪಾದಿಸಬಹುದು. ಕೋಬಿಯಾ, ಸಿಲ್ವರ್ ಪೊಂಪಾನೋ, ಇಂಡಿಯನ್ ಪೊಂಪಾನೋ ಹಾಗೂ ಸ್ನ್ಯಾಪರ್ ಸೇರಿದಂತೆ ಮೌಲ್ಯಯುತ ಮೀನು ಪ್ರಬೇಧಗಳನ್ನು ಇಲ್ಲಿ ಉತ್ಪಾದಿಸಬಹುದು. ಈ ಹ್ಯಾಚರಿ ಸ್ಥಾಪನೆಯಿಂದ ಸಮುದ್ರ ಕೇಜ್ ಫಾರ್ಮಿಂಗ್‌ಗೆ ಉತ್ತೇಜನ ದೊರೆಯುವ ಜತೆಗೆ ಉದ್ಯೋಗ ಸೃಷ್ಟಿ, ಸ್ಥಳೀಯ ಉದ್ಯಮಿಗಳಿಗೆ ಅವಕಾಶ ಹಾಗೂ ಮೀನು ಸಂಪತ್ತು ಉತ್ಪಾದನೆ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ಹೀಗಾಗಿ, ಮಂಗಳೂರಿನಲ್ಲಿ ಸಮುದ್ರ ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಅಗತ್ಯ ತಾಂತ್ರಿಕ ನೆರವು ಹಾಗೂ ಆರ್ಥಿಕ ಸಹಾಯದ ಮೂಲಕ ಈ ಯೋಜನೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕ್ಯಾ. ಚೌಟ ಅವರು ಕೇಂದ್ರ ಮೀನುಗಾರಿಕಾ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.