ಬಿಲ್ಡರ್ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶ

ಬಿಲ್ಡರ್ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶ

ಮಂಗಳೂರು: ಮಂಗಳೂರಿನ ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರಿನ ಆಧಾರದಲ್ಲಿ ನಮ್ಮ ವಿರುದ್ಧ ಗನ್ ಹಿಡಿದು ಬೆದರಿಕೆ ಹಾಕಿದ ಬಿಲ್ಡರ್ ಜಿತೇಂದ್ರ ಕೊಟ್ಟಾರಿ ಹಾಗೂ ಅವರ ಪುತ್ರಿ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ಪ್ರಕರಣದ ದೂರುದಾರ ತನುಷ್ ಶೆಟ್ಟಿ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿ ಮೊದಲು ನಾವು ದೂರು ನೀಡಿದ್ದರೂ ಪೊಲೀಸರು ಎಫ್‌ಐಆರ್ ದಾಖಲಿಸಿರಲಿಲ್ಲ. ಆದರೆ, ನಮ್ಮ ವಿರುದ್ಧ ಜಿತೇಂದ್ರ ಅವರು ನೀಡಿದ ಸುಳ್ಳು ದೂರಿನಂತೆ ಎಫ್‌ಐಆರ್ ದಾಖಲಿಸಿ, ನಮ್ಮನ್ನು ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ಬಳಿಕ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದು, ನ್ಯಾಯಾಲಯ ತನಿಖೆ ನಡೆಸುವಂತೆ ಆದೇಶಿಸಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

2024ರ ಅಕ್ಟೋಬರ್‌ನಲ್ಲಿ ನಾನು ನನ್ನ ಸ್ನೇಹಿತ ಅಂಕಿತ್ ಶೆಟ್ಟಿ ಜತೆಗೆ ಬಜ್ಪೆಯಿಂದ ನಗರದ ಕದ್ರಿ ಕಡೆಗೆ ಆಗಮಿಸುತ್ತಿದ್ದಾಗ ಜಿತೇಂದ್ರ ಕೊಟ್ಟಾರಿ ಅವರು ವೇಗವಾಗಿ ವಾಹನ ಚಲಾಯಿಸುತ್ತಿದ್ದು, ನಮ್ಮ ವಾಹನಕ್ಕೆ ಡಿಕ್ಕಿಯಾಗುವುದು ಸ್ವಲ್ಪದರಲ್ಲೇ ತಪ್ಪಿ ಹೋಗಿತ್ತು. ಈ ಬಗ್ಗೆ ಜಿತೇಂದ್ರ ಕೊಟ್ಟಾರಿ ಅವರಲ್ಲಿ ಪ್ರಶ್ನಿಸಲು ಅವರ ವಾಹನ ನಿಲ್ಲಿಸುವಂತೆ ಸೂಚಿಸಿದರೂ, ಅವರು ವಾಹನ ನಿಲ್ಲಿಸಲಿಲ್ಲ. ನಗರದಲ್ಲಿ ಅವರ ಮನೆಯ ಬಳಿ ಬಂದಾಗ ಅವರು ಪುತ್ರಿ ನಮ್ಮ ವಿರುದ್ಧ ರೇಗಾಡಿದ್ದಾರೆ. ನಮ್ಮ ವಿರುದ್ಧ ಹಲ್ಲೆ ಸಹಿತ ವಿವಿಧ ಆರೋಪಗಳನ್ನು ಮಾಡಿ ಗನ್ ತೋರಿಸಿ ಬೆದರಿಸಿದ್ದಾರೆ. ಈ ಬಗ್ಗೆ ನಾವು ಮೊದಲು ಬರ್ಕೆ ಠಾಣೆಗೆ ತೆರಳಿ ದೂರು ನೀಡಿದ್ದರೂ, ಸ್ವೀಕರಿಸಿರಲಿಲ್ಲ. ಇದೀಗ ಘಟನೆ ನಡೆದ ಸ್ಥಳಗಳ ಸಂಪೂರ್ಣ ಸಿಸಿಟಿವಿ ದೃಶ್ಯ, ವೈದ್ಯಕೀಯ ವರದಿ ಪರಿಶೀಲಿಸಿ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article