ಪಾವಗಡ ಪ್ರಕಾಶ ರಾವ್‌ರಿಂದ ಶ್ರೀಮದ್ಭಗವದ್ಗೀತಾ ಪ್ರವಚನ ಮಾಲೆ
ಮಂಗಳೂರು: ಶ್ರೀ ಶಾರದಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ, ಶ್ರೀ ಶಾರದಾ ಮಾತೃ ಮಂಡಳಿ ಸುರತ್ಕಲ್ ವತಿಯಿಂದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಡಾ. ಪಾವಗಡ ಪ್ರಕಾಶ ರಾವ್ ಅವರಿಂದ ಶ್ರೀಮದ್ಭಗವದ್ಗೀತಾ ಪ್ರವಚನ ಮಾಲೆ-10 ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಭಾಂಗಣದಲ್ಲಿ ಫೆ.22 ರಿಂದ ಮಾ.1 ರವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ 7.30ರವರೆಗೆ ನಡೆಯಲಿದೆ.
ಫೆ.22 ರಂದು ಸಂಜೆ 5 ಗಂಟೆಗೆ ಉದ್ಘಾಟನೆ ನಡೆಯಲಿದ್ದು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರವಚನ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ಣಾಟಕ ಬ್ಯಾಂಕ್ ಲಿ. ಆಡಳಿತ ನಿರ್ದೇಶಕ ರಾಘವೇಂದ್ರ ಎಸ್. ಭಟ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಹರಿಕೃಷ್ಣ ಪುನರೂರು, ಪ್ರಶಾಂತ್ ಶೇಟ್, ಕೆ.ಶ್ರೀಪತಿ ಭಟ್, ಸುಧಾಕರ ರಾವ್ ಪೇಜಾವರ ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ವೈ. ರಾಘವೇಂದ್ರ ರಾವ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಫೆ.23 ರಿಂದ 28ರವರೆಗೆ ಪ್ರತಿದಿನ ಸಂಜೆ 5.45ಕ್ಕೆ ಗಣ್ಯವ್ಯಕ್ತಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ, ದೀಪ ಬೆಳಗಿಸಿ ಶುಭ ಹಾರೈಸಲಿದ್ದಾರೆ. ಮಾ.1 ರಂದು ಸಮಾರೋಪ ಸಮಾರಂಭ ಜರಗಲಿದ್ದು, ಸಾಹಿತ್ಯ ಕೇಂದ್ರ ಮಂಗಳೂರಿನ ರತ್ನಾಕರ ಕುಳಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಸುಗುಣ ಎಂ. ರಾಘವೇಂದ್ರ ಭಟ್ ಹಾಗೂ ಎಂ. ಎಂ. ಪ್ರಭು ಇವರು ಮುಖ್ಯ ಅತಿಥಿಗಳಾಗಿರುತ್ತಾರೆ. ಪ್ರತೀ ದಿನ ಸಂಜೆ 5 ರಿಂದ 6 ರವರೆಗೆ ವಿವಿಧ ಮಹಿಳಾ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮವು ಇದೆ ಎಂದರು.
ಈ ಸಂದರ್ಭದಲ್ಲಿ ಹರಿಕೃಷ್ಣ ಪುನರೂರು, ಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.