ವಂದೇ ಭಾರತ್: ಮಂಗಳೂರು-ಬೆಂಗಳೂರು ನಾಲ್ಕು ತಾಸಿನ ಪ್ರಯಾಣಕ್ಕಿದೆ ತೊಡಕು

ವಂದೇ ಭಾರತ್: ಮಂಗಳೂರು-ಬೆಂಗಳೂರು ನಾಲ್ಕು ತಾಸಿನ ಪ್ರಯಾಣಕ್ಕಿದೆ ತೊಡಕು


ಮಂಗಳೂರು: ಇನ್ನೇನು ವಂದೇ ಭಾರತ್ ರೈಲು ಓಡಲಿದೆ. ರಾಜಧಾನಿ ಬೆಂಗಳೂರು-ಕರಾವಳಿ ರಾಜಧಾನಿ ಮಂಗಳೂರು ನಡುವೆ ಸಂಪರ್ಕ ಇನ್ನೂ ಸುಲಭವಾಗಲಿದೆ. ಮಂಗಳೂರು - ಬೆಂಗಳೂರು ನಡುವೆ ಬರೇ ನಾಲ್ಕೇ ತಾಸಿನ ಪ್ರಯಾಣ ಎಂದು ಕರಾವಳಿ ಮಂದಿ ಖುಷಿ ಪಡುತ್ತಿರುವಾಗಲೇ ಇದು ಸಾಧ್ಯನಾ ಎಂಬ ಪ್ರಶ್ನೆಯೂ ಮೂಡಿದೆ.

ಸದ್ಯ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುತ್ತಿರುವ ಎಕ್ಸ್‌ಪ್ರೆಸ್ ರೈಲುಗಳ ಅವಧಿ ನೋಡಿದರೆ ಕನಿಷ್ಠ 9ರಿಂದ 10 ತಾಸುಗಳು ಬೇಕು.  ಪ್ರಸ್ತಾವಿತ ವಂದೇ ಭಾರತ್ ರೈಲಿನಿಂದ ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣದ ಸಮಯ ಇತರ ಎಕ್ಸ್ ಪ್ರಸ್ ರೈಲುಗಳಿಗೆ ಹೋಲಿಸಿದರೆ 2 ರಿಂದ 3 ಗಂಟೆ ಮಾತ್ರ ಉಳಿತಾಯವಾಗಲಿದ್ದು, ಕನಿಷ್ಠ 7.30 ತಾಸು ಬೇಕು.

ಶಿರಾಡಿ ಘಾಟ್ ಭಾಗದ ಮಾರ್ಗಧಲ್ಲಿ ವಿದ್ಯುದೀಕರಣ ಪೂರ್ಣವಾಗಿದೆ. ಕೆಲವೊಂದು ಸುರಕ್ಷತಾ ಪರೀಕ್ಷೆಗಳು ನಡೆದು ಸುರಕ್ಷತಾ ದೃಢೀಕರಣ ಪತ್ರ ಬಂದ ಬಳಿಕ ಮಂಗಳೂರಿನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಮಂಗಳೂರಿಗೆ ಎರಡು ರೈಲುಗಳು ಸಂಚರಿಸಲಿವೆ. ಈ ರೈಲು ಮಂಗಳೂರಿನಿಂದ ಉಡುಪಿ, ಕಾರವಾರದ ತನಕವೂ ವಿಸ್ತರಣೆಗೊಳ್ಳಲಿದೆ.  ಆದರೆ ಈ ಮಾರ್ಗದ ಹಳಿಗಳ ಸಾಮರ್ಥ್ಯ ಮತ್ತು ಘಟ್ಟ ಪ್ರದೇಶದ ಭೌಗೋಳಿಕ ಸವಾಲುಗಳಿಂದಾಗಿ ಇಲ್ಲಿ ಓಡುವ ವಂದೇ ಭಾರತ್ ರೈಲು ಇತರ ವಂದೇ ಭಾರತ್ ರೈಲುಗಳಿಗಿಂತ ಕಡಿಮೆ ವೇಗದಲ್ಲಿ ಸಂಚರಿಸಲಿದೆ ಎಂಬುದು ತಜ್ಞರ ಅಭಿಪ್ರಾಯ.

ಕಡಿದಾದ ಘಟ್ಟ ಪ್ರದೇಶ:

ಸಾಮಾನ್ಯವಾಗಿ ವಂದೇ ಭಾರತ್ ರೈಲು 100, 110 ಕಿ.ಮೀ.ಗಿಂತಲೂ ಅಧಿಕ ವೇಗದಲ್ಲಿ ಸಂಚರಿಸುತ್ತವೆ. ಆದರೆ ಇಲ್ಲಿ ಆ ಸಾಧ್ಯತೆಗಳು ಇಲ್ಲ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ನಡುವೆ 55 ಕಿ.ಮೀ. ಅತ್ಯಂತ ಕಡಿದಾದ ಘಟ್ಟ ಪ್ರದೇಶವಿದೆ. ಇಲ್ಲಿ ಸುರಕ್ಷೆಯ ದೃಷ್ಟಿಯಿಂದ ರೈಲುಗಳು ಗಂಟೆಗೆ ಗರಿಷ್ಠ 30 ಕಿ.ಮೀ. ವೇಗದಲ್ಲಿ ಮಾತ್ರ ಚಲಿಸಲು ಸಾಧ್ಯ. ಇದರಿಂದ ರೈಲು ಸಂಚಾರದ ಸರಾಸರಿ ವೇಗ ಕಡಿಮೆಯಾಗಲಿದೆ. 

ಬೆಂಗಳೂರಿನಿಂದ ಸಕಲೇಶಪುರದವರೆಗೆ ಮತ್ತು ಸುಬ್ರಹ್ಮಣ್ಯದಿಂದ ಮಂಗಳೂರಿನವರೆಗೆ ಹಳಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಗಂಟೆಗೆ 80ರಿಂದ 110 ಕಿ.ಮೀ. ವೇಗದಲ್ಲಿ ಚಲಿಸಬಹುದು. ಉಳಿದ ಹಾದಿಯನ್ನು 30 ಕಿ.ಮೀ. ವೇಗದಲ್ಲೇ ಚಲಿಸಬೇಕು. ಆಗ ಒಟ್ಟಾರೆ ಪ್ರಯಾಣದಲ್ಲಿ ರೈಲಿನ ಸರಾಸರಿ ವೇಗ ಗಂಟೆಗೆ ಸುಮಾರು 50ರಿಂದ 55 ಕಿ.ಮೀ. ಇರುತ್ತದೆ. ಈ ಲೆಕ್ಕದಲ್ಲಿ ನೋಡಿದರೆ ಬೆಂಗಳೂರು - ಮಂಗಳೂರು ವಂದೇ ಭಾರತ್ ಪ್ರಯಣಕ್ಕೆ ಕನಿಷ್ಠ ಏಳರಿಂದ ಏಳುವರೆ ತಾಸು ಬೇಕು. ಸದ್ಯದ ಸ್ಥಿತಿಯಲ್ಲಿ ನಾಲ್ಕು ತಾಸಿನ ಪ್ರಯಾಣ ಸಾಧ್ಯವಿಲ್ಲ.

ಹಳಿ ದ್ವಿಪಥ:

ಬೆಂಗಳೂರು-ಮಂಗಳೂರು ನಡುವೆ ರೈಲು ಮಾರ್ಗದ ದೂರ 380 ಕಿ.ಮೀ. ಸದ್ಯದ ಸ್ಥಿತಿಯಲ್ಲಿ ನಾಲ್ಕು ತಾಸಿಗೆ ಮಂಗಳೂರು - ಬೆಂಗಳೂರು ಪ್ರಯಾಣ ಅಸಾಧ್ಯ. ಮಬೆಂಗಳೂರು-ಹಾಸನ ಹಳಿ ದ್ವಿಪಥಗೊಂಡು 130 ಕಿ.ಮೀ ವೇಗದಲ್ಲಿ ಸಂಚರಿಸಬೇಕು. ಹಾಸನ-ಸಕಲೇಶಪುರ-ಸುಬ್ರಹ್ಮಣ್ಯ-ಮಂಗಳೂರು ಮಾರ್ಗವೂ ದ್ವಿಪಥಗೊಂಡು ಕನಿಷ್ಠ 110 ಕಿ.ಮೀ. ವೇಗದಲ್ಲಿ ಚಲಿಸುವಂತಾಗಬೇಕು ಆಗ ಮಾತ್ರ ನಾಲ್ಕೈದು ತಾಸಿನ ಪ್ರಯಾಣ ಸಾಧ್ಯ. ಮಂಗಳೂರು ಸೆಂಟ್ರಲ್ ಮತ್ತು ಯಶವಂತಪುರ ಜಂಕ್ಷನ್‌ನಿಂದ ಏಕಕಾಲಕ್ಕೆ ಎರಡು ವಂದೇ ಭಾರತ್ ಆರಂಭಿಸಿದರೆ ಈ ಮಾರ್ಗದಲ್ಲಿ ಕೆಲವು ರೈಲುಗಳ ಕ್ರಾಸಿಂಗ್ ತಪ್ಪಿಸಬಹುದು. ಇದರಿಂದ ಒಂದಷ್ಟು ಸಮಯ ಉಳಿತಾಯವಾಗಬಹುದು.

ಎರಡು ರೈಲು:

ಮಂಗಳೂರು-ಉಡುಪಿ ಮೂಲಕ ವಂದೇ ಭಾರತ್ ರೈಲು ಕಾರವಾರದ ತನಕ ಸಂಚರಿಸಲಿದೆ. ಕರಾವಳಿ ಕರ್ನಾಟಕ ಅತೀ ಉದ್ದದ ರೈಲು ಮಾರ್ಗವನ್ನು ಸಂಪರ್ಕಿಸುವ ಕಾರಣ ಎರಡು ವಂದೇ ಭಾರತ್ ರೈಲು ಸೇವೇಯನ್ನು ಆರಂಭಿಸಲಾಗುವುದು. ಒಂದು ಕಾರವಳಿಯಿಂದ ಬೆಂಗಳೂರು ಇನ್ನೊಂದು ಬೆಂಗಳೂರಿನಿಂದ ಕರಾವಳಿಗೆ ಓಡಾಡಲಿದೆ ಎಂದು ಇತ್ತೀಚಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದರು.

ಕನಿಷ್ಠ ಏಳೂವರೆ ತಾಸು ಬೇಕೇ ಬೇಕು:

ಮಂಗಳೂರಿನಿಂದ ಸುಬ್ರಹ್ಮಣ್ಯ ತನಕವೂ 50 ಕಿ.ಮೀ.ಗಿಂತ ವೇಗ ಸಾಧ್ಯವಿಲ್ಲ. ವಂದೇ ಭಾರತ್ 100ರ ವೇಗಕ್ಕಿಂತ ಹೆಚ್ಚು ಓಡುವುದಾದರೂ ಈ ಮಾರ್ಗದಲ್ಲಿ ಅದು ಸಾಧ್ಯವಿಲ್ಲ. ಏನೇ ಮಾಡಿದರೂ ಮಂಗಳೂರು-ಬೆಂಗಳೂರು ಪ್ರಯಾಣಕ್ಕೆ ಕನಿಷ್ಠ ಏಳೂವರೆ ತಾಸು ಬೇಕೇ ಬೇಕು. ವಂದೇ ಭಾರತ್‌ಗೆ ದುಬಾರಿ ಪ್ರಯಾಣ ದರ ಕೊಟ್ಟು ಪ್ರಯಾಣ ಮಾಡುವುದಕ್ಕಿಂತ  ಈಗಿರುವ ರೈಲುಗಳ ವೇಗವನ್ನು ಹೆಚ್ಚಿಸಿದರೆ ಈಗಿನ ಪ್ರಯಾಣದ ಅವಧಿಯಲ್ಲಿ ಒಂದು ತಾಸು ಉಳಿಸಲು ಸಾಧ್ಯವಿದೆ. ಇದರಿಂದ ಪ್ರಯಾಣಿಕರ  ದುಡ್ಡು, ಸಮಯ ಉಳಿಯಲಿದೆ ಎಂದು ಪಶ್ಚಿಮ ಕರಾವಳಿ ರೈಲು ಯಾತ್ರಿಕರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹನುಮಂತ ಕಾಮತ್ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article