ಕುಡಿದ ಮತ್ತಿನಲ್ಲಿ ಠಾಣೆಗೆ ನುಗ್ಗಿ ದಾಂಧಲೆ: ಪೊಲೀಸರನ್ನೇ ನಿಂದಿಸಿದ ಕೆನರಾ ಬ್ಯಾಂಕ್ ಸಿಬ್ಬಂದಿ ಬಂಧನ
ಮಂಗಳೂರು: ನೆರೆಹೊರೆಯವರ ಮೇಲೆ ಕ್ಷುಲ್ಲಕ ವಿಚಾರಕ್ಕೆ ದೂರು ನೀಡಲು ಪೊಲೀಸ್ ಠಾಣೆಗೆ ಹೋದಾತನೇ ಜೈಲು ಪಾಲಾಗಿರುವ ಅಪರೂಪದ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ.
ಮಂಗಳೂರಿನ ಲ್ಯಾಂಡ್ ಲಿಂಕ್ಸ್‌ನ ಗ್ರೀನ್ ಪಾರ್ಕ್ ಅಪಾರ್ಟ್‌ಮೆಂಟ್ ನಿವಾಸಿ ಹಾಗೂ ಕೆನರಾ ಬ್ಯಾಂಕಿನ ಯೆಯ್ಯಾಡಿ ಶಾಖೆಯ ಸಿಬ್ಬಂದಿ ಮಂಜಪ್ಪ ಸುರೇಂದ್ರನ್ ಬಂಧನಕ್ಕೊಳಗಾದ ವ್ಯಕ್ತಿ.
ಮನೆಯ ಅಂಗಳದಲ್ಲಿ ಶಟಲ್ ಆಡ ಆಡುತ್ತಿದ್ದ ಬಗ್ಗೆ ಮಂಜಪ್ಪ ಸುರೇಂದ್ರನ್ ಕಾವೂರು ಪೊಲೀಸರಿಗೆ ದೂರವಾಣಿ ಮೂಲಕ ಪದೇ ಪದೇ ಫೋನ್ ಮಾಡಿ ದೂರು ನೀಡಿದ್ದರು. ಪೊಲೀಸ್ ತುರ್ತು ಕರೆ 112ಕ್ಕೂ ದೂರು ದಾಖಲಿಸಲು ಕುಡಿದ ಮತ್ತಿನಲ್ಲಿ ಕಾವೂರು ಪೊಲೀಸ್ ಠಾಣೆಗೆ ಹೋದ ಕೆನರಾ ಬ್ಯಾಂಕ್ ಯೆಯ್ಯಾಡಿ ಶಾಖೆಯ ಸಿಬ್ಬಂದಿ ಮಂಜಪ್ಪ ಸುರೇಂದ್ರನ್ ಎಂಬವರು ಬಂಧನಕ್ಕೊಳಗಾಗಿದ್ದು, ಆರೋಪಿಗೆ ಮಂಗಳೂರಿನ ಮೂರನೇ ಜೆಎಂಎಫ್‌ಸಿ ನ್ಯಾಯಾಲಯ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದ ಹಿನ್ನೆಲೆ:
ಈ ಘಟನೆ ನಡೆದಿರುವುದು ಮಂಗಳೂರಿನ ಲ್ಯಾಂಡ್ ಲಿಂಕ್ಸ್ ಗ್ರೀನ್ ಪಾರ್ಕ್‌ನಲ್ಲಿ. ಸಂಜೆ ಹೊತ್ತು ಯುವಕರು ತಮ್ಮ ಪಾಡಿಗೆ ಶಟಲ್ ಆಡುತ್ತಿದ್ದಾಗ, ತನಗೆ ನಿದ್ರೆ ಮಾಡಲು ತೊಂದರೆ ಆಗುತ್ತಿದೆ ಎಂದು ಬೊಬ್ಬೆ ಹಾಕಿ ಪತ್ನಿಯ ಜೊತೆಗೆ ಕಾವೂರು ಪೊಲೀಸ್ ಠಾಣೆಗೆ ಧಾವಿಸಿದ್ದರು.
ಅಲ್ಲಿ ತನ್ನ ದೂರನ್ನು ದಾಖಲಿಸಬೇಕು, ದೂರನ್ನು ಸ್ವೀಕರಿಸದಿದ್ದರೆ ಪೊಲೀಸ್ ಕಮಿಷನರ್ ಅವರ ಬಳಿ ಹೋಗುವೆ ಎಂದು ಪೊಲೀಸ್ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ. ಆತನ ಕುಡಿತದ ಮತ್ತಿನಲ್ಲಿ ಇರುವುದನ್ನು ಪೊಲೀಸರು ಗಮನಿಸಿದ್ದು, ತಕ್ಷಣ ಇದನ್ನು ಅರಿತುಕೊಂಡ ಆರೋಪಿ ತನ್ನ ಪತ್ನಿಯ ಜೊತೆಗೆ ತಾನು ಆಗಮಿಸಿದ ಸ್ಕೂಟರಿನಲ್ಲಿ ಪಲಾಯನ ಮಾಡಲು ಪ್ರಯತ್ನಿಸಿದ್ದಾನೆ.
ಆತನನ್ನು ಪಚ್ಚನಾಡಿಯ ಕೊಲಾಸೋ ಕಾಲೇಜ್ ಬಳಿ ವಶಕ್ಕೆ ಪಡೆದುಕೊಂಡ ಪೊಲೀಸರು ಆತನ ಪತ್ನಿಯನ್ನು ಪೊಲೀಸ್ ಜೀಪಿನಲ್ಲಿ ಮನೆಗೆ ಸುರಕ್ಷಿತವಾಗಿ ಬಿಟ್ಟಿದ್ದು, ಈ ಮಧ್ಯೆ, ವಶದಲ್ಲಿ ಇದ್ದ ಆರೋಪಿ ಮಂಜಪ್ಪ ಸುರೇಂದ್ರನ್ ಪೊಲೀಸರಿಗೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ‘ನೀವು ಹಣ ಕೊಟ್ಟು ಪೊಲೀಸ್ ಇಲಾಖೆಗೆ ಸೇರಿದ್ದೀರಿ, ನಿಮ್ಮನ್ನು ಇಲಾಖೆಯಲ್ಲಿ ಇಲ್ಲದಂತೆ ಮಾಡುವೆ’ ಎಂದು ಸಿಬ್ಬಂದಿಯನ್ನೇ ನಿಂದಿಸಿದ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.