ಕರಾವಳಿಯ ಸಮಗ್ರ ಅಭಿವೃದ್ಧಿಗೆ ಒತ್ತು: ಮಂಡಳಿಯಲ್ಲಿ ಜನಪ್ರತಿನಿಧಿಗಳ ಬೇಡಿಕೆ

ಕರಾವಳಿಯ ಸಮಗ್ರ ಅಭಿವೃದ್ಧಿಗೆ ಒತ್ತು: ಮಂಡಳಿಯಲ್ಲಿ ಜನಪ್ರತಿನಿಧಿಗಳ ಬೇಡಿಕೆ


ಮಂಗಳೂರು: ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ನೀಡಬೇಕೆಂದು ಮೂರು ಜಿಲ್ಲೆಗಳ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.

ಗುರುವಾರ ಸ್ಪೀಕರ್ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ‘ಪ್ರಜಾ ಸೌಧ’ದಲ್ಲಿ ನಡೆದ ಕರಾವಳಿ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಚಿವರು, ಶಾಸಕರು ಭಾಗವಹಿಸಿ, ಕರಾವಳಿಯ ಅಭಿವೃದ್ಧಿಯನ್ನು ಸಮಗ್ರವಾಗಿ ಪರಿಗಣಿಸಿ, ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ತಿಳಿಸಿದರು.

ಸ್ಪೀಕರ್ ಮಾತನಾಡಿ,, ಕಡಲಕೊರತೆ ನಿಯಂತ್ರಣಕ್ಕೆ ತೀರ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ಎತ್ತರದಲ್ಲಿ ನಿರ್ಮಿಸಿದರೆ, ಕೊರೆತ ತಡೆಯುವುದರೊಂದಿಗೆ, ಸಂಚಾರ ವ್ಯವಸ್ಥೆ ಸುಧಾರಣೆಗೂ ಸಹಕಾರಿಯಾಗಲಿದೆ. ಇದು ಇಲ್ಲಿನ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಹೇಳಿದರು.  ಪಶ್ಚಿಮ ವಾಹಿನಿ ಯೋಜನೆಗೆ ಇನ್ನಷ್ಟು ಅನುದಾನ ಅಗತ್ಯವಿದೆ. ಉಳ್ಳಾಲ ಕೋಟೆಪುರ ಜೆಟ್ಟಿ ನಿರ್ಮಾಣದಿಂದ ಮಂಗಳೂರು ಬಂದರಿನ ಮೇಳೆ ಒತ್ತಡ ಕಡಿಮೆಯಾಗಲಿದೆ ಎಂದರು.

ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ಎಸ್. ವೈದ್ಯ ಮಾತನಾಡಿ, ಕರಾವಳಿಯ 3 ಜಿಲ್ಲೆಗಳ ೧೩ ಮೀನುಗಾರಿಕೆ ಬಂದರುಗಳ ವ್ಯಾಪ್ತಿಯಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತಲು ನಿರ್ಧರಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ್ದು, ಅನುದಾನ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಸ್ಥಳಗಳಲ್ಲಿ ಮೀನು ಮಾರುಕಟ್ಟೆ ನಿರ್ಮಾಣ ಕೈಗೆತ್ತಿಕೊಳ್ಳಬೇಕು ಎಂದು ಹೇಳಿದರು.

ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಕಡಲಕೊರೆತಕ್ಕೆ ಶಾಶ್ವತ ಪರಿಹಾರ ಒದಗಿಸಲು ಒತ್ತು ನೀಡಬೇಕು. ಪ್ರವಾಸೋದ್ಯಮ ಉತ್ತೇಜನಕ್ಕೆ ವಾಟರ್ ಮೆಟ್ರೋ ಯೋಜನೆಯನ್ನು ಜಾರಿಗೆ ತರಬೇಕು. ಪ್ರಮುಖ ಪ್ರವಾಸಿ ತಾಣಗಳ ಅಬಿವೃದ್ಧಿಗೆ ಅನುದಾನ ಇಡಬೇಕು ಎಂದು ಹೇಳಿದರು.

ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಮಾತನಾಡಿ, ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್) ಕಚೇರಿಯನ್ನು ಬೆಂಗಳೂರಿನಿಂದ ಸ್ಥಳಾಂತರಿಸಿ, ಮಂಗಳೂರು ಅಥವಾ ಉಡುಪಿಯಲ್ಲಿ ಸ್ಥಾಪಿಸಬೇಕು. ಇದರಿಂದ ವಿವಿಧ ಸಿಆರ್ಝಡ್ ಸಂಬಂಧಿತ ಅನುಮತಿಗಳಿಗೆ ದೀರ್ಘಕಾಲ ಕಾಯುವುದು ತಪ್ಪಲಿದೆ. ಕರಾವಳಿಯಲ್ಲಿ ಕೃಷಿ ವಿಶ್ವವಿದ್ಯಾನಿಲಯ ಅಗತ್ಯವಿದ್ದು, ಬ್ರಹ್ಮಾವರದಲ್ಲಿರುವ ಕೃಷಿ ವಿಜ್ಞಾನ ಕಾಲೇಜನ್ನು ವಿಶ್ವವಿದ್ಯಾನಿಲಯವಾಗಿ ಮೇಲ್ದರ್ಜೆಗೇರಿಸಬಹುದಾಗಿದೆ ಎಂದು ಹೇಳಿದರು.

ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಮೀನುಗಾರಿಕೆ ಮತ್ತು ಬಂದರು ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಮೀನುಗಾರಿಕಾ ಬಂದರುಗಳ ಅಭಿವೃದ್ಧಿಗೆ ತೊಡಕಾಗುತ್ತಿದೆ. ಈ ಎರಡೂ ಇಲಾಖೆಗಳನ್ನು ವಿಲೀನಗೊಳಿಸಿ, ಇಂಜಿನಿಯರಿಂಗ್ ವಿಭಾಗವನ್ನು ಪ್ರಾರಂಭಿಸಬೇಕು. ಇದರಿಂದ ಬಂದರುಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ತ್ವರಿತಗೊಳಿಸಬಹುದು ಎಂದರು. ಅಳಿವೆಗಳ ಹೂಳೆತ್ತಲು ಡ್ರೆಜ್ಜಿಂಗ್ ಮಾಡಲು ಗುತ್ತಿಗೆ ಪ್ರಕ್ರಿಯೆ ವಿಳಂಭವಾಗುತ್ತಿದೆ. ಡ್ರೆಜ್ಜಿಂಗ್ ಗುತ್ತಿಗೆ ನೀಡುವ ಬದಲು ರಾಜ್ಯ ಸರಕಾರವೇ ಡ್ರೆಜ್ಜಿಂಗ್ ಯಂತ್ರ ಖರೀದಿಸಬೇಕು. ದೇಶದ ಪಶ್ಚಿಮ ಕರಾವಳಿಯಲ್ಲಿ ಸಮಾನ ಮೀನುಗಾರಿಕಾ ನೀತಿ ಜಾರಿಯಾಗಬೇಕು. ಪ್ರಸ್ತುತ ಮೀನುಗಾರಿಕೆ ರಜೆ ಸೇರಿದಂತೆ ಒಂದೊಂದು ರಾಜ್ಯದಲ್ಲಿ ವಿಭಿನ್ನ ನೀತಿಗಳಿದ್ದು, ಕರ್ನಾಟಕದ ಮೀನುಗಾರರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಮಾತನಾಡಿದರು..

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಉಪಸ್ಥಿತರಿದ್ದರು. ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಡಿಸೋಜ, ಮಂಡಳಿಯ ಅಧಿಕಾರಿಗಳಾದ ಮಂಜುನಾಥ ಶೆಟ್ಟಿ, ಶ್ರೀಧರ್ ಟಿ.ಡಿ. ಮುಹಮ್ಮದ್ ತೌಸೀಫ್, ಹರಿಹರ ವಿ ಹರಿಕಾಂತ್, ಪವನ್ ಕುಮಾರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article