ಮಂಗಳೂರು ಹಿಂದಿನ ಗತವೈಭವಕ್ಕೆ ಮರಳುತ್ತಿದೆ: ಡಾ. ಜಿ. ಪರಮೇಶ್ವರ್
ಅವರು ಇಂದು ಮಂಗಳೂರು ಪೊಲೀಸ್ ಕಮಿಷನರೇಟ್ ಹಾಗೂ ಜಿಲ್ಲಾ ಪೊಲೀಸ್ ವತಿಯಿಂದ ಮೂಡುಬಿದಿರೆಯ ಪೊಲೀಸರಿಗೆ ವಸತಿಗೃಹ ಉದ್ಘಾಟನೆ ಹಾಗೂ ಮಂಗಳೂರಿನಲ್ಲಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ನಗರದ ಪೊಲೀಸ್‌ಲೈನ್‌ನಲ್ಲಿ ನೆರವೇರಿಸಿ ಮಾತನಾಡಿದರು.
ಈ ಕಾರ್ಯ ಕೇವಲ ಪೊಲೀಸ್ ಇಲಾಖೆಯಿಂದ ಮಾತ್ರವಲ್ಲ ಇಲ್ಲಿನ ಪ್ರಜ್ಞಾವಂತ ಪ್ರಜೆಗಳಿಂದ ಕೂಡ ಸಹಕಾರಿಯಾಗಿದೆ. ಬೆಂಗಳೂರನ್ನು ಬಿಟ್ಟರೆ ಮಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಇದರ ಅಭಿವೃದ್ಧಿಗೆ ಪೊಲೀಸ್ ಇಲಾಖೆಯ ಕೊಡುಗೆ ಅಪಾರ ಇದೆ. ಮಂಗಳೂರಿನಲ್ಲಿ ಬಂದರು, ವಿಮಾನ ನಿಲ್ದಾಣ, ರೈಲು ಮಾರ್ಗದ ವ್ಯವಸ್ಥೆ ಇದ್ದು, ಇದು ಕೂಡ ಜಿಲ್ಲೆಯ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಜನರ ಭಾವನೆಗಳಿಗೆ ಸ್ಪಂಧಿಸುತ್ತಾ ಅವರೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಮಳೆ-ಗಾಳಿ, ಹಗಲು-ರಾತ್ರಿ ಎನ್ನದೇ ನಿರಂತರವಾಗಿ ಕೆಲಸ ಮಾಡುದ್ದಾರೆ. ಅಂತವರಿಗೆ ನೆಮ್ಮದಿಯಿಂದ ಬದುಕಲು ಮನೆ ಅಗತ್ಯವಿದ್ದು, ‘ಪೊಲೀಸ್ ಗೃಹ’ ಯೋಜನೆಯಡಿಯಲ್ಲಿ 2015 ರಲ್ಲಿ ಮೊದಲಬಾರಿಗೆ ಈ ಯೋಜನೆಯನ್ನು ಪ್ರಾರಂಭಿಸಿದ್ದು, 2025ಕ್ಕೆ ಅಂತ್ಯವಾಗಿದ್ದು, ಆಗ ರಾಜ್ಯದಲ್ಲಿ ಶೇ.40 ರಷ್ಟು ಮಾತ್ರ ಮನೆಯಾಗಿದ್ದು, ಇನ್ನೂ ಶೇ.60 ರಷ್ಟು ಮನೆಯಾಗಲು ಬಾಕಿ ಇದ್ದು, ಅದನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಲ್ಲಿ ಮಾತನಾಡಿ ಈ ಯೋಜನೆಯನ್ನು 2030ರ ವರೆಗೆ ವಿಸ್ತರಿಸಿದ್ದು, ರಾಜ್ಯದಲ್ಲಿರುವ 1.10 ಲಕ್ಷ ಪೊಲೀಸರಿಗೂ ಮನೆ ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
2015ರಲ್ಲಿ ಒಂದು ಮನೆ 2 ಕೋಣೆ, ಒಂದು ಅಡುಗೆ ಕೋಣೆ, ಹಾಗೂ ಹಾಲ್ ನಿರ್ಮಾಣಕ್ಕೆ 18 ಲಕ್ಷ ತಗುಲುತ್ತಿದ್ದು, ಈಗ ಅದೇ ಮನೆ ನಿರ್ಮಾಣಕ್ಕೆ 32 ಲಕ್ಷ ತಗುಲುತ್ತಿದೆ. ನೆಮ್ಮದಿಯ ಬದುಕಿಗೆ ಮನೆ ಅಗತ್ಯವಿದ್ದು, ಮನೆ ಸ್ವಚ್ಛವಾಗಿದ್ದರೆ, ಮನಸ್ಸು ಸ್ವಚ್ಛವಾಗಿರುತ್ತದೆ ಎಂದ ಅವರು ಈ ವರ್ಷದ ಅಂತ್ಯದೊಳಗೆ ಜಿಲ್ಲೆಗೆ 100 ಮನೆಗಳನ್ನು ನೀಡುವುದಾಗಿ ಘೋಷಿಸಿದರು.
ಔರತ್‌ಕರ್ ಸಮಿತಿಯನ್ನು ರಚಿಸಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಎಷ್ಟು ವೇತನ ನೀಡುತ್ತಿದ್ದಾರೆ ಎಂದು ಅಧ್ಯಾಯನ ಮಾಡಿಸಿ ನಂತರ ಆಗ ಇದ್ದ ವೇತನದಲ್ಲಿ ಹೆಚ್ಚಳ ಮಾಡಿ ಈಗ ನೆಮ್ಮದಿಯ ಬದುಕಿನೊಂದಿಗೆ ಆತ್ಮಸ್ಥೈರ್ಯ ಹಾಗೂ ಸ್ವಾಭಿಮಾನದ ಬದುಕನ್ನು ನಡೆಸುವಂತೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಕುಲ್‌ದೀಪ್ ಜೈನ್ ಇಲ್ಲಿ ಪೊಲೀಸ್ ಆಯುಕ್ತರಾಗಿದ್ದ ಸಂದರ್ಭದಲ್ಲಿ ಇಲ್ಲಿ ಡ್ರಗ್ಸ್ ತಡೆಯ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದು, ಅವರಿಂದ ಹಿಡಿದು ಈಗಿನ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ಉತ್ತಮ ಕಾರ್ಯಚರಣೆ ನಡೆಸಿ, ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿಯೊಂದಿಗೆ ಪರೀಕ್ಷೆ ನಡೆಸುವುದು, ರಸ್ತೆಯಲ್ಲಿ ವಿದ್ಯಾರ್ಥಿಗಳನ್ನು ನಿಲ್ಲಿಸಿ ಪರಿಕ್ಷಿಸುವುದರಿಂದ ಉತ್ತಮ ರೀತಿಯಲ್ಲಿ ನಿಯಂತ್ರಣಕ್ಕೆ ಬಂದಿದೆ ಎಂದರು.
ಡ್ರಗ್ಸ್ ಮಾರುವವರು ಮತ್ತು ಸೇವನೆ ಮಾಡುವವರನ್ನು ಬಂಧಿಸಿ, ಇದ್ದ ಎಲ್ಲಾ ಕೇಸ್‌ಗಳನ್ನು ಹಾಕುವಂತೆ ಈಗಾಗಲೇ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು, ಇದಕ್ಕೆ ಪೂರಕವಾಗುವಂತೆ ತಂದೆ-ತಾಯಿ ಹಾಗೂ ಶಿಕ್ಷಕರು ಸಹಕರಿಸಿದರೆ ಸಂಪೂರ್ಣವಾಗಿ ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಬಹುದು, ಈಗ ಡ್ರಗ್ಸ್ ಸೇವನೆ ಮಾಡುವ ಮಕ್ಕಳು ಮುಂದೆ ಬುದ್ದಿಯನ್ನು ಕಳೆದುಕೊಂಡು, ಬೇಡದ ಕೆಲಸವನ್ನು ಮಾಡಿ ಅಪರಾಧಿಗಳಾಗುತ್ತಾರೆ ಅಂತವರನ್ನು ತಡೆಯುವ ಕೆಲಸ ಆಗಬೇಕು ಎಂದು ಹೇಳಿದರು.
ಮಂಗಳೂರು ನಗರದಲ್ಲಿ ಹಳೆಯ ಕಟ್ಟಡದಲ್ಲಿ ಹಾಗೂ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ 3 ಪೊಲೀಸ್ ಠಾಣೆಗಳಿಗೆ ಕಟ್ಟಡವನ್ನು ನೀಡಲಾಗುವುದು ಎಂದ ಅವರು ನಗರದೊಳಗೆ ಜೈಲು ಇದ್ದು, ಅದನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಕಟ್ಟಡ ಸಿದ್ದವಾಗುತ್ತಿದ್ದು, ಕಾಂಪೌಂಡ್ ನಿರ್ಮಾಣ ಅಗತ್ಯವಿದ್ದು, ಮುಖ್ಯಮಂತ್ರಿಗಳಲ್ಲಿ ಈಗಾಗಲೇ ಮಾತನಾಡಿದ್ದು, ಪಿಡ್ಲ್ಯೂಡಿ ಇಲಾಖೆಯಿಂದ 50 ಕೋಟಿ ನೀಡುವಂತೆ ಕೇಳಿಕೊಂಡಿದ್ದು, ಆ ಹಣ ಬಿಡುಗಡೆಯಾಗಿ ಕಾಂಪೌಂಡ್ ಆದೊಡನೆಯೇ ಸಮಸ್ಯೆ ಬಗೆಹರಿಯಲಿದೆ. ಅಲ್ಲಿಯ ತನಕ ಈಗಾಗಲೇ ಟೆನ್ನಿಕಲ್ ತಂಡದವರಲ್ಲಿ ಮಾತನಾಡಿ ಈಗಿನ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಪೊಲೀಸ್ ಇಲಾಖೆಯು ಉತ್ತಮ ಕೆಲಸ ಕಾರ್ಯಗಳೊಂದಿಗೆ, ಡ್ರಗ್ಸ್ ಪರೀಕ್ಷೆ ಮಾಡುತ್ತಿರುವುದು ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದಂತಾಗಿದೆ. ನಮ್ಮಲ್ಲಿಗೆ 3 ಹಳೆಯದಾದ ಪೊಲೀಸ್ ಠಾಣೆಯ ಬದಲಿಗೆ ಹೊಸ ಕಟ್ಟಡ ಹಾಗೂ 2 ಹೊಸ ಠಾಣೆಯನ್ನು ನೀಡುವಂತೆ ಮನವಿ ಮಾಡಿದರು.
ಜೈಲು ಭಾಗದ ಸುತ್ತ ಮುತ್ತಲಿನ ಜನತೆಗೆ ಜೈಲ್‌ನ ಜಾಮರ್‌ನಿಂದ ಸಮಸ್ಯೆಯಾಗುತ್ತಿದ್ದು, ಅದನ್ನು ನಿವಾರಿಸುವಂತೆ ಹಾಗೂ ಸಿಸಿ ಟಿವಿ ಫುಟೇಜ್ ಕ್ಯಾಮರಾ ಅನುಷ್ಠಾನ ಗೊಂಡಿದ್ದು, ಇನ್ನಷ್ಟು ಸಿಸಿ ಟಿವಿ ಫುಟೇಜ್ ಕ್ಯಾಮರಾಗಳನ್ನು ಅಳವಡಿಸುವಂತೆ ಕೇಳಿಕೊಂಡರು.
ಐಜಿ ಅಮಿತ್ ಸಿಂಗ್, ಹಲವು ನಿಗಮಗಳ ಅಧ್ಯಕ್ಷರುಗಳು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ವಾಗತಿಸಿ, ಡಿಸಿಪಿ ಮಿಥುನ್ ಹೆಚ್. ವಂದಿಸಿದರು.