ಫೀಲ್ಡ್ ಟೆಸ್ಟ್ ಕಿಟ್ ತರಬೇತಿ ಹಾಗೂ ಅಭಿಯಾನ
Saturday, February 7, 2026
ಮೂಡುಬಿದಿರೆ: ಹಲವು ಮೂಲಗಳಿಂದ ನೀರು ಹರಿದು ಬಂದು ಬಾವಿ, ಕೆರೆ ಹಾಗೂ ಇತರ ಕಡೆಗಳಲ್ಲಿ ನೀರು ಸಂಗ್ರಹವಾಗಿ ಜನರಿಗೆ ದಿನಬಳಕೆಗೆ ಉಪಯೋಗವಾಗುತ್ತದೆ. ಆದರೆ ನಮ್ಮ ಸುತ್ತಮುತ್ತ ಇರುವಂತಹ ನೀರು ದಿನನಿತ್ಯ ಬಳಕೆಗೆ ಯೋಗ್ಯವಾಗಿದೆಯೇ ಎಂಬುದನ್ನು ನಾವು ಪರೀಕ್ಷೆ ನಡೆಸಿ ತಿಳಿದುಕೊಳ್ಳಬೇಕು. ಅದಕ್ಕಾಗಿಯೇ ಫೀಲ್ಡ್ ಟೆಸ್ಟ್ ಕಿಟ್ ಅನ್ನು ಬಳಸಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪರೀಕ್ಷೆ ನಡೆಸುವವರು ಸಂಗ್ರಹವಾದ ನೀರಿನ ಬಗ್ಗೆ ಗಮನ ಹರಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ನೀರಿನ ಪರೀಕ್ಷೆ ನಡೆಸಬೇಕು ಎಂದು ಮೂಡುಬಿದಿರೆ ತಾಲೂಕು ಪಂಚಾಯತ್ ನ ಕಾರ್ಯನಿರ್ವಾಹಕಾಧಿಕಾರಿ ಕುಸುಮಾಧರ ಬಿ. ಹೇಳಿದರು.
ಅವರು ಮೂಡುಬಿದಿರೆ ತಾಲೂಕು ಪಂಚಾಯತ್ ನ ಸಭಾಂಗಣದಲ್ಲಿ ಗುರುವಾರ ನಡೆದ ದ.ಕ.ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪ್ರಯೋಗಾಲಯದ ವತಿಯಿಂದ ನಡೆದ ನೀರಿನ ಫೀಲ್ಡ್ ಟೆಸ್ಟ್ ಕಿಟ್ (ಎಫ್ಟಿಕೆ) ತರಬೇತಿ ಹಾಗೂ ಅಭಿಯಾನದಲ್ಲಿ ನೀರಿನ ಪರೀಕ್ಷೆಯ ಮಹತ್ವವನ್ನು ತಿಳಿಸಿದರು.
ಕೆಲವೊಂದು ಪ್ರದೇಶಗಳಲ್ಲಿ ಕಾರ್ಖಾನೆಗಳಿಂದ ಹಾಗೂ ಕೊಳಚೆ ಹೊಂಡಗಳಲ್ಲಿರುವ ನೀರು ಬಾವಿಗಳಿಗೆ ಸೇರಿ ಕಲುಷಿತಗೊಳ್ಳುತ್ತದೆ. ಇದನ್ನು ಗಮನಿಸಿ ಅಂತಹ ನೀರಿನ ಪರೀಕ್ಷೆಯನ್ನು ಆಶಾ ಕಾರ್ಯಕರ್ತರು, ಶಿಕ್ಷಕರು ಕೂಡ ಮಾಡಬಹುದು ಎಂದರು.
ನೀರು ಮತ್ತು ನೈರ್ಮಲ್ಯ ಇಲಾಖೆಯ ಜೂನಿಯರ್ ಇಂಜಿನಿಯರ್ ಲಕ್ಷ್ಮೀ ಹಾಗೂ ನೀರಿನ ಪರಿವೀಕ್ಷಕರಾದ ವಿನಿಷಾ ಎಸ್. ಅವರು ನೀರಿನ ಪರೀಕ್ಷೆಯ ವಿಧಾನ, ಕಿಟ್ಗಳ ಬಳಕೆ, ಕಲುಷಿತ ನೀರಿನ ದುಷ್ಪರಿಣಾಮಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಶಿವಣ್ಣ ಸಹಾಯಕ ಕಾರ್ಯಪಾಲ ಇಂಜಿನಿಯರ್ ನೀರು ಮತ್ತು ನೈರ್ಮಲ್ಯ ಇಲಾಖೆ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ನ ಪಿಡಿಓಗಳು, ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು, ಪಂಪ್ ಆಪರೇಟರ್ಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಪಂಚಾಯತ್ ಸಿಎಚ್ಒಗಳು, ನಲ್ ಜಲ್ ಮಿತ್ರ ಸಿಬ್ಬಂದಿಗಳು ಹಾಜರಿದ್ದರು. ತರಬೇತಿಯನ್ನು ತಾ.ಪಂ. ಕಚೇರಿ ವ್ಯವಸ್ಥಾಪಕರಾದ ವಸಂತ ವಿ.ಅವರು ಸ್ವಾಗತಿಸಿ, ವಂದಿಸಿದರು.
