ಇಬ್ಬರು ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೇತಾಜಿ ಬ್ರಿಗೇಡ್ ನಿಂದ  ನೆರವು: ಹಸ್ತಾಂತರ

ಇಬ್ಬರು ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೇತಾಜಿ ಬ್ರಿಗೇಡ್ ನಿಂದ ನೆರವು: ಹಸ್ತಾಂತರ

ಕಂಬಳದಲ್ಲಿ ರೂ.1,88,928 ದೇಣಿಗೆ ಸಂಗ್ರಹ 


ಮೂಡುಬಿದಿರೆ: ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ನೇತಾಜಿ ಬ್ರಿಗೇಡ್ ಮೂಡುಬಿದಿರೆಯಲ್ಲಿ ನಡೆದ 23ನೇ ವರ್ಷದ ಕೋಟಿ–ಚೆನ್ನಯ ಜೋಡುಕರೆ ಕಂಬಳದ ಸಂದಭ೯ದಲ್ಲಿ  22ನೇ ಸೇವಾ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿತು.

ನೇತಾಜಿ ಬ್ರಿಗೇಡ್‌ನ ಮೂವರು ಕಾರ್ಯಕರ್ತರಾದ ಸುಶಾಂತ್ ಸುವರ್ಣ, ನಿಖಿಲ್ ಭಟ್ ಮತ್ತು ಸುಶಾಂತ್ ಚಾಮುಂಡಿಬೆಟ್ಟ ಅವರು  ವಿವಿಧ ರೀತಿಯ ವಿಶೇಷ ವೇಷಧಾರಣೆ ಧರಿಸಿ ಮೂಡುಬಿದಿರೆ ನಗರ ಪ್ರದೇಶ ಹಾಗೂ ಕೋಟಿ–ಚೆನ್ನಯ ಜೋಡುಕರೆ ಕಂಬಳ ನಡೆಯುವ ಸ್ಥಳದಲ್ಲಿ ಸಂಚರಿಸಿ  ಒಟ್ಟು ₹1,88,928 ಮೊತ್ತವನ್ನು  ಸಂಗ್ರಹಿಸಿದ್ದರು.


ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಮೂಡುಬಿದಿರೆ ಕೊಡಂಗಲ್ಲು ನಿವಾಸಿ ಅದ್ವಿತ್ ಡಿ. ದೇವಾಡಿಗ (9) ಅವರ ವೈದ್ಯಕೀಯ ಚಿಕಿತ್ಸೆ ಹಾಗೂ ಪುನರ್ವಸತಿ ನೆರವಿಗಾಗಿ ಮತ್ತು ಪುತ್ತಿಗೆ ಗ್ರಾಮದ ನಿವಾಸಿ ಅಕ್ಷತಾ ಕುಮಾರಿ (35) ಅವರ ಡಯಾಲಿಸಿಸ್ ಹಾಗೂ ಚಿಕಿತ್ಸಾ ವೆಚ್ಚಕ್ಕಾಗಿ  ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಕಾರ್ಯ ಕೈಗೊಳ್ಳಲಾಗಿತ್ತು.

ಕಂಬಳ ವೀಕ್ಷಣೆಗೆ ಆಗಮಿಸಿದ್ದ ಸಾವಿರಾರು ಮಂದಿ, ಸ್ಥಳೀಯ ವ್ಯಾಪಾರಿಗಳು ಹಾಗೂ ವಿವಿಧ ಸಂಘ–ಸಂಸ್ಥೆಗಳು ಈ ಮಾನವೀಯ ಕಾರ್ಯಕ್ಕೆ ಕೈಜೋಡಿಸಿದ್ದರು.


ನೆರವು ಹಸ್ತಾಂತರ:

ಸಂಗ್ರಹವಾದ ದೇಣಿಗೆಯನ್ನು ಶುಕ್ರವಾರ ಸಾಯಂಕಾಲ ಮೂಡುಬಿದಿರೆ ಸ್ವರಾಜ್ಯ ಮೈದಾನ ಬಳಿಯ ಆದಿಶಕ್ತಿ ದೇವಸ್ಥಾನದಲ್ಲಿ ಫಲಾನುಭವಿಗಳ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು.

ಸಂಘಟನೆಯ ಸಂಚಾಲಕ ರಾಹುಲ್ ಕುಲಾಲ್ ಮಾತನಾಡಿ, “ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವುದು ನಮ್ಮ ಸಾಮಾಜಿಕ ಕರ್ತವ್ಯ. ಸಾರ್ವಜನಿಕರ ಅಪಾರ ಸಹಕಾರದಿಂದ ಈ ಸೇವಾ ಯೋಜನೆ ಯಶಸ್ವಿಯಾಗಿದೆ. ಸಹಕಾರ ನೀಡಿದ ಕಂಬಳ ಸಮಿತಿ ಅಧ್ಯಕ್ಷ ಉಮಾನಾಥ ಎ. ಕೋಟ್ಯಾನ್, ಕಾರ್ಯದರ್ಶಿಗಳಾದ ರಂಜಿತ್ ಪೂಜಾರಿ ಮತ್ತು ನಾಗರಾಜ್ ಪೂಜಾರಿ, ಆಳ್ವಾಸ್ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ಜೈನ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಪ್ರಭಾತ್, ಹಿನ್ನೆಲೆ ಧ್ವನಿ ನೀಡಿದ ನಿತ್ ಶೆಟ್ಟಿ ಮಾರ್ನಾಡ್ ಹಾಗೂ ಹಗಲು–ಇರುಳು ಶ್ರಮಿಸಿದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಮೂಡುಬಿದಿರೆ ನಗರದ ಅಂಗಡಿ ಮಾಲಕರು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಕಂಬಳಾಭಿಮಾನಿಗಳ ಮಾನವೀಯ ಸಹಕಾರಕ್ಕೆ ಸಂಘಟನೆ ಚಿರಋಣಿಯಾಗಿದೆ” ಎಂದರು.

ಪುರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಸಂಘಟನೆಯ ಗೌರವಾಧ್ಯಕ್ಷ ನಾಗರಾಜ ಪೂಜಾರಿ ಮಾತನಾಡಿ, “ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಚಿಕಿತ್ಸೆ ಮತ್ತು ಅಗತ್ಯ ನೆರವು ನೀಡುವಲ್ಲಿ ನೇತಾಜಿ ಬ್ರಿಗೇಡ್ ಮುಂಚೂಣಿಯಲ್ಲಿದೆ. ಈ ಹಿಂದೆ ಸಮಾಜಸೇವೆಯಲ್ಲಿ ಸಕ್ರಿಯರಾಗಿದ್ದ ದಿವಂಗತ ವಿಜೇಶ್ ಸಮಿತ್ ಅವರ ಸೇವಾ ಗುಣವನ್ನು ಸ್ಮರಿಸಿ, ಅವರ ಆಶಯದಂತೆ ಸಂಘಟನೆ ಅಶಕ್ತರಿಗೆ ಸಹಾಯ ಹಸ್ತ ಚಾಚುತ್ತಿದೆ. ಸಂಘಟನೆಯು ಸದಸ್ಯರಿಂದ ಮಾಸಿಕ ದೇಣಿಗೆ ಸಂಗ್ರಹಿಸಿ, ಆ ಹಣವನ್ನು ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮೂಲಕ ಪಾರದರ್ಶಕ ಸೇವೆಯಲ್ಲಿ ತೊಡಗಿದೆ” ಎಂದು ಹೇಳಿದರು.

ಅಭಿಯಾನಕ್ಕೆ ಸಹಕರಿಸಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉದ್ಯಮಿ ಸಂತೋಷ್ ಶೆಟ್ಟಿ, ಸಂಘಟನೆ ಅಧ್ಯಕ್ಷ ದಿನೇಶ್ ಶೆಟ್ಟಿ, ವಿದ್ಯಾರ್ಥಿ ನಾಯಕ ಧನುಷ್ ಕುಲಾಲ್, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ರಾಹುಲ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಕುಮಾರ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article