ಮೂಡುಬಿದಿರೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಉದ್ಘಾಟನೆ

ಮೂಡುಬಿದಿರೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಉದ್ಘಾಟನೆ


ಮೂಡುಬಿದಿರೆ: ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಮತ್ತು ನೆರವು ನೀಡುವುದು ಕಾನೂನು ಸೇವಾ ಸಮಿತಿಯ ಮುಖ್ಯ ಉದ್ದೇಶವಾಗಿದೆ. ವಕೀಲರುಗಳು ಕಾನೂನಿನ ಒಂದು ಭಾಗವಾಗಿರುವುದರಿಂದ ಸ್ಥಳೀಯ ಕುಂದು ಕೊರತೆಗಳನ್ನು ನಿವಾರಿಸಿ ಜನರಿಗೆ, ಬಡವರಿಗೆ ನ್ಯಾಯವನ್ನು ಒದಗಿಸುವ ಜವಾಬ್ದಾರಿಯಿದೆ ಎಂದು ದ.ಕ ಜಿಲ್ಲಾ ಪ್ರಧಾನ  ನ್ಯಾಯಾಧೀಶ ಬಸವರಾಜ್ ಹೇಳಿದರು. 


ಅವರು ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೂಡುಬಿದಿರೆ ನ್ಯಾಯಾಂಗ ಇಲಾಖೆ, ವಕೀಲರ ಸಂಘ ಇವುಗಳ ಸಹಯೋಗದೊಂದಿಗೆ ಮಂಗಳವಾರ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು. 


ಈ ಹಿಂದೆಯೇ ವ್ಯವಸ್ಥೆ ಆಗಬೇಕಿತ್ತು ಇದೀಗ ತಡವಾಗಿದ್ದರೂ ಅವಕಾಶ ಒದಗಿ ಬಂದಿದ್ದು ಇದನ್ನು ಉತ್ತಮ ರೀತಿಯಲ್ಲಿ ನಿವ೯ಹಿಸುವಂತೆ ಸೂಚಿಸಿದರು.

ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಸದಸ್ಯ ಕಾರ್ಯದರ್ಶಿ  ಜೈಬುನ್ನೀಸಾ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ  ತಾಲೂಕು ಆಡಳಿತ ವ್ಯವಸ್ಥೆ ಮತ್ತು ಪೊಲೀಸ್ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ಬಡವರಿಗೆ ಸಹಾಯವನ್ನು ಮಾಡುವಂತಹ ಅವಕಾಶವನ್ನು ಸೆಕ್ಷನ್ 12ರ ಅಡಿಯಲ್ಲಿ ಮಾಡಿಕೊಡಲಾಗಿದೆ. ಹಿರಿಯ ನಾಗರಿಕರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಕಾನೂನು ನೆರವನ್ನು ಕೂಡ ಒದಗಿಸುವ ಜವಾಬ್ದಾರಿ ವಕೀಲರುಗಳ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಹರೀಶ್ ಪಿ ಅಧ್ಯಕ್ಷತೆ ವಹಿಸಿದ್ದರು. 

ಮೂಡುಬಿದಿರೆ ತಾಲೂಕು ಕಾನೂನು ಸೇವೆಗಳ ಸಮಿತಿಯ ಪ್ರಥಮ ಅಧ್ಯಕ್ಷ, ಹಿರಿಯ ಸಿವಿಲ್ ನ್ಯಾಯಾಧೀಶ ಮಧುಕರ್ ಪಿ ಭಾಗವತ್ ಮಾತನಾಡಿ ಮೂಡುಬಿದಿರೆಗೆ ಈ ಸಮಿತಿಯ ಅವಶ್ಯಕತೆಯಿದೆ. ತಾಲೂಕಾಗಿರದ ಹಿನ್ನೆಲೆಯಲ್ಲಿ ಈ ಸಮಿತಿ ಮುಂದಕ್ಕೆ ಹೋಗಿತ್ತು ಇದೀಗ ಒದಗಿ ಬಂದಿದ್ದು ಎಲ್ಲರ ಸಹಕಾರದೊಂದಿಗೆ  ಜವಾಬ್ದಾರಿಯುತ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸುವ ಆಶ್ವಾಸನೆಯನ್ನು ನೀಡಿದರು. 

ಮೂಡುಬಿದಿರೆಯ ಮಣ್ಣಿನ ಮಗ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ , ರಾಜ್ಯಪಾಲ ಅಬ್ದುಲ್ ನಜೀರ್ ಅವರ ಬರಪೂರ ಕೊಡುಗೆಗಳ ಸಹಾಯಗಳನ್ನು ಹಿರಿಯ ನ್ಯಾಯವಾದಿಗಳಾದ ಕೆ ಆರ್ ಪಂಡಿತ್, ಸೀನಿಯರ್ ಕಮಿಟಿ ಚೇರ್ಮನ್ ಬಾಹುಬಲಿ ಪ್ರಸಾದ್ ನೆನಪಿಸಿಕೊಂಡರು.

ವೇದಿಕೆಯಲ್ಲಿ ಜೆಎಂಎಫ್‌ಸಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕಿಯರುಗಳಾದ ನೇತ್ರಾವತಿ, ಶೋಭಾ ಎಸ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ಉಪಸ್ಥಿತರಿದ್ದರು. 

ಎಂ.ಎಸ್ ತಂತ್ರಿ ಸ್ವಾಗತಿಸಿದರು. ಸುಧಾಮಣಿ ಎಸ್ ಕಾರ್ಯಕ್ರಮ ನಿರ್ವಹಿಸಿದರು. ಜಗನ್ನಾಥ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article