ಕನ್ನಡ ಸಾಹಿತ್ಯವು ಸಂಸ್ಕೃತಿ ಮತ್ತು ಬದುಕಿನ ಪ್ರತಿಬಿಂಬ: ಸಾಹಿತಿ ಹಮೀದ್ ಪಕ್ಕಲಡ್ಕ

ಕನ್ನಡ ಸಾಹಿತ್ಯವು ಸಂಸ್ಕೃತಿ ಮತ್ತು ಬದುಕಿನ ಪ್ರತಿಬಿಂಬ: ಸಾಹಿತಿ ಹಮೀದ್ ಪಕ್ಕಲಡ್ಕ

 ಪಾಲಡ್ಕದಲ್ಲಿ ದ್ವಿತೀಯ ಸಾಹಿತ್ಯ ಸಮ್ಮೇಳನ


ಮೂಡುಬಿದಿರೆ: ಕನ್ನಡ ಸಾಹಿತ್ಯವು ಸಂಸ್ಕೃತಿ, ಇತಿಹಾಸ ಮತ್ತು ಬದುಕಿನ ಪ್ರತಿಬಿಂಬವಾಗಿದೆ. ಇದು ಕಾವ್ಯ, ನಾಟಕ, ಕಾದಂಬರಿ, ವಿಮರ್ಶೆ ಮತ್ತು ವಚನಗಳಂತಹ ವಿವಿಧ ಪ್ರಕಾರಗಳಲ್ಲಿ ಸಮೃದ್ಧವಾಗಿದೆ ಎಂದು ಸಾಹಿತಿ ಅಬ್ದುಲ್ ಹಮೀದ್ ಪಕ್ಕಲಡ್ಕ ಹೇಳಿದರು.


ಅವರು ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ಪಾಲಡ್ಕದ ಪೂಪಾಡಿಕಲ್ಲಿನ ಗುರು ನಾರಾಯಣ ಸೇವಾ ಸಂಘದ ಸಭಾಭವನದಲ್ಲಿ ಶನಿವಾರ ನಡೆದ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸವಾ೯ಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. 


ಕನ್ನಡ ಸಾಹಿತ್ಯವನ್ನು ಮುಖ್ಯವಾಗಿ ನಾಲ್ಕು ಘಟ್ಟಗಳಾಗಿ ವಿಂಗಡಿಸಬಹುದು. ಒಂದು ಪೂರ್ವದ ಹಳೆಗನ್ನಡ, ಎರಡು ಹಳೆಗನ್ನಡ, ಮೂರು ನಡುಗನ್ನಡ ಹಾಗೂ ಹೊಸಗನ್ನಡ ಅಥವಾ ಆಧುನಿಕ ಸಾಹಿತ್ಯ ಪೂರ್ವದ ಹಳೆಗನ್ನಡ ಕಾಲದಲ್ಲಿ ಹಲ್ಕಿಡಿ-ಬಾದಾಮಿಯೇ ಮೊದಲಾದ ಅಮೂಲ್ಯ ಶಾಸನಗಳು, ಕವಿರಾಜ ಮಾರ್ಗ- ವಡ್ಡಾರಾಧನೆಗಳೇ ಮೊದಲಾದ ಶಾಸ್ತ್ರ-ಸಾಹಿತ್ಯ ಕೃತಿಗಳು ದೊರೆತು ಅದಾಗಲೇ ಕನ್ನಡ ಭಾಷೆ ಪ್ರಬುದ್ಧವಾಗಿತ್ತು ಎನ್ನುವುದಕ್ಕೆ ಸಾಕ್ಷಿ ದೊರೆಯುತ್ತದೆ. ಹಳೆಗನ್ನಡ ಕಾಲದಲ್ಲಿ ಆದಿಕವಿ ಪಂಪ, ರನ್ನ, ಪೊನ್ನರಂತಹ ರತ್ನತ್ರಯರು ಕನ್ನಡ ಸಾಹಿತ್ಯವನ್ನು ಬೆಳಗಿದರು. ನಡುಕನ್ನಡ ಕಾಲದಲ್ಲಿ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಉತ್ತುಂಗಕ್ಕೇರಿತು. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ಶಿವಶರಣರ ವಚನಗಳು ಸಮಾನತೆಯನ್ನು ಸಾರಿದವು. ಪುರಂದರದಾಸ, ಕನಕದಾಸರು 'ದಾಸ ಸಾಹಿತ್ಯ'ವನ್ನು ಶ್ರೀಮಂತಗೊಳಿಸಿದರು. ಹೊಸಗನ್ನಡ ಕಾಲದಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಭಾವದಿಂದ ಭಾವಗೀತೆ, ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಪ್ರಕಾರಗಳು ಬಂದುವು. ಕುವೆಂಪು, ಬೇಂದ್ರೆ, ಮಾಸ್ತಿ, ಶಿವರಾಮ ಕಾರಂತರೇ ಮೊದಲಾದ ಸಾಹಿತಿಗಳು ನವೋದಯ ಸಾಹಿತ್ಯದ ಪ್ರಮುಖರಾಗಿದ್ದರು. ನಂತರ ನವ್ಯ ಸಾಹಿತ್ಯ, ದಲಿತ ಸಾಹಿತ್ಯ ಹಾಗೂ ಬಂಡಾಯ ಸಾಹಿತ್ಯಗಳು ಕನ್ನಡ ಸಾಹಿತ್ಯವನ್ನು ಇನ್ನಷ್ಟು ಸಮೃದ್ಧಗೊಳಿಸಿದವು.

ಇಷ್ಟೆಲ್ಲಾ ಕನ್ನಡದ ಪ್ರಗತಿಯ ಮಧ್ಯೆಯೂ ಒಂದು ಸಣ್ಣ ಬೇಸರದ ಸಂಗತಿಯೆಂದರೆ ಕರ್ನಾಟಕದಲ್ಲಿ ಕಳೆದ 5 ವರ್ಷಗಳಲ್ಲಿ ಸುಮಾರು 947 ಸರಕಾರಿ ಕನ್ನಡ ಶಾಲೆಗಳು ಮಕ್ಕಳ ಕೊರತೆಯಿಂದ ಮುಚ್ಚಲ್ಪಟ್ಟಿವೆ ಹಾಗೂ ವಿಲೀನಗೊಂಡಿವೆ. ಆಂಗ್ಲ ಮಾಧ್ಯಮದ ಮೇಲಿನ ವ್ಯಾಮೋಹ, ಪೋಷಕರಲ್ಲಿ ಅರಿವಿನ ಕೊರತೆ, ಗ್ರಾಮೀಣ ಭಾಗದಿಂದ ನಗರಕ್ಕೆ ವಲಸೆ, ಖಾಸಗಿ ಶಾಲೆಗಳ ಹೆಚ್ಚಳ, ಮೂಲ ಸೌಕರ್ಯಗಳ ಕೊರತೆ, ಶಿಕ್ಷಕರ ಭರ್ತಿಯಲ್ಲಿ ವಿಳಂಬ ಇದಕ್ಕೆ ಮುಖ್ಯ ಕಾರಣವಾಗಿದೆ. 

ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಬೇಕಾದರೆ ಸರಕಾರ ಹೊಸ ಯೋಜನೆಯನ್ನು ಸಿದ್ಧಪಡಿಸಬೇಕು. ಯಾವುದೇ ಆಂಗ್ಲಮಾಧ್ಯಮ ಶಾಲೆಗೆ ಕಡಿಮೆ ಇಲ್ಲದಂತೆ ಸರಕಾರಿ ಶಾಲೆಗಳನ್ನು ಸಜ್ಜುಗೊಳಿಸಬೇಕು.,

ಶಾಲಾ ಕಟ್ಟಡ, ಕೊಠಡಿ, ಶೌಚಾಗೃಹ, ಆಟದ ಬಯಲುಗಳ ನವೀಕರಣ ಆಗಬೇಕು, ಕಲಿಕಾ ಸಾಮಾಗ್ರಿಗಳು ಬೇಕಾದಷ್ಟು ಲಭ್ಯವಿರಬೇಕು,ಅಧ್ಯಾಪಕರ ಕೊರತೆಯನ್ನು ತುಂಬಬೇಕು.

ಕನ್ನಡ ಸಾಹಿತ್ಯವು ಕೇವಲ ಬರವಣಿಗೆಯಲ್ಲ, ಅದು ಕನ್ನಡಿಗರ ಆತ್ಮ. ಹಳೆಯ ತತ್ತ್ವಗಳೊಂದಿಗೆ ಆಧುನಿಕ ವಿಚಾರಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತಿರುವ ಕನ್ನಡ ಸಾಹಿತ್ಯವು ಮುಂದಿನ ಪೀಳಿಗೆಗೆ ಭಾಷಾ ಪ್ರೇಮವನ್ನು ತಿಳಿಸುವ ದಾರಿದೀಪವಾಗಬೇಕು. ಕವಿ ಕುವೆಂಪು ಅವರು ಹೇಳಿದಂತೆ 'ಭಾರತವು ಸರ್ವ ಜನಾಂಗದ ಶಾಂತಿಯ ತೋಟ.' ಅದರ ಮಾಲಿಕರಾದ ನಾವೆಲ್ಲರೂ ಸಹೋದರತೆಯಿಂದ, ಭಾವೈಕ್ಯತೆಯಿಂದ ಬದುಕಿ ಕನ್ನಡವನ್ನು ಸಮೃದ್ಧಗೊಳಿಸೋಣ ಎಂದರು.

ಕಟೀಲು ಕ್ಷೇತ್ರದ ಕಮಲಾದೇವಿ ಅಸ್ರಣ್ಣ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ ಕಾನೂನಿನಲ್ಲಿ ಅಡಕವಾಗಿರುವ ಭಾಷೆ ಕನ್ನಡ. ಮೊಬೈಲ್ ನಿಂದ ಮಸ್ತಕ ಬೆಳೆಯುವುದಿಲ್ಲ ಬದಲಾಗಿ ಪುಸ್ತಕಗಳನ್ನು ಓದುವ ಗೀಳನ್ನು ಬೆಳೆಸಿಕೊಳ್ಳುವುದರಿಂದ ಮಸ್ತಕಗಳು ಬೆಳೆಯುತ್ತದೆಯಲ್ಲದೆ ಸಾಹಿತ್ಯ ಸಮ್ಮೇಳನಗಳನ್ನು ಮಾಡುವುದಕ್ಕೂ ಸಾಥ೯ಕವಾಗುತ್ತದೆ.

ತಾಯಿಗಿರುವಷ್ಟು ತಾಳ್ಮೆ ಬೇರೆ ಯಾವ ವ್ಯಕ್ತಿಗೆ ಇರಲು ಸಾಧ್ಯವಿಲ್ಲ ಆದ್ದರಿಂದಲೇ ನಮ್ಮ ದೇಶದಲ್ಲಿ ನದಿಗಳಿಗೆ, ಕನ್ನಡ ಮಾತೆಗೆ ಭುವನೇಶ್ವರಿ ಎಂಬ ಹೆಸರಿಂದ ಕರೆಯಲಾಗುತ್ತಿದೆ ಎಂದ ಅವರು ಸಾಹಿತ್ಯಗಳು ಸಮಾಜದ ಹಿತವನ್ನು ಬಯಸುವಂತಿರಬೇಕು ಆದ್ದರಿಂದ ಎಲ್ಲಾ ಕೃತಿಗಳು, ಬರಹಗಳು, ಸಾಹಿತ್ಯ, ಉತ್ತಮ ಸಂದೇಶಗಳು ನಾಡಿನ ಎಲ್ಲರನ್ನೂ ಒಟ್ಟುಗೂಡಿಸುವಂತಿರಬೇಕು ಎಂದರು.

ಕೃತಿ ಬಿಡುಗಡೆ : ಎಂ. ರಾಘವೇಂದ್ರ ಭಂಡಾರ್ಕರ್ ಅವರ ಕವನ ಸಂಕಲನ 'ಓ ಮನಸೇ', ಹಮೀದ್ ಪಕ್ಕಲಡ್ಕ ಅವರ ಕಥಾ ಸಂಕಲನ 'ಹಾದಿಯೇ ಇಲ್ಲದ ಹಾದಿ' ಹಾಗೂ ಆಳ್ವಾಸ್ ನ ಬಿಎಡ್ ವಿದ್ಯಾಥಿ೯ ಅಮೋಘ ಸಿದ್ಧ ವಿಠಲ ಗೌಡ ಪಾಟೀಲ ಅವರ ಕವನ ಸಂಕಲನ 'ಭಾವ ಅಮೋಘ'ಯನ್ನು ಬಿಡುಗಡೆಗೊಳಿಸಲಾಯಿತು. 

ಮೂಡುಬಿದಿರೆ ಚೌಟರ ಅರಮನೆಯ ಅರಸರಾಗಿರುವ ಕುಲದೀಪ ಎಂ.,ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ರೈತ ಸಂಘದ ಅಧ್ಯಕ್ಷ ಎಂ. ಧನಕೀತಿ೯ ಬಲಿಪ, ಕನ್ನಡ ಸಾಹಿತ್ಯ ಪರಿಷತ್ತಿನ ಮುಲ್ಕಿ ಘಟಕದ ಅಧ್ಯಕ್ಷ ಮಿಥುನ್ ಉಡುಪ,  ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ, ಪ್ರಮುಖರಾದ  ಸಂಪತ್ ಸಾಮ್ರಾಜ್ಯ, ಎಂಸಿಎಸ್ ಬ್ಯಾಂಕಿನ ವಿಶೇಷ ಕತ೯ವ್ಯಾಧಿಕಾರಿ ಚಂದ್ರಶೇಖರ ಎಂ., ಸಿ. ಹೆಚ್ ಗಫೂರ್, ಹಿರಿಯ ವಕೀಲ ಕೆ. ಆರ್. ಪಂಡಿತ್, ಸಂಶೋಧಕ ಪುಂಡಿಕೖ ಗಣಪಯ್ಯ ಭಟ್, ಬಿಲ್ಲವ ಸಂಘದ ಅಧ್ಯಕ್ಷ ಲೀಲಾಧರ್ ಉಪಸ್ಥಿತರಿದ್ದರು. 

ಸಮಿತಿಯ ಗೌರವಾಧ್ಯಕ್ಷ ಕೆ. ಪಿ. ಸುಚರಿತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ ಶ್ರೀನಾಥ್ ಆಶಯ ನುಡಿಗಳನ್ನಾಡಿದರು.

ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಸ್ವಾಗತಿಸಿ ಕಾಯ೯ಕ್ರಮ ನಿರೂಪಿಸಿದರು. ಎಲ್. ಜೆ. ಫೆನಾ೯ಂಡಿಸ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article