ಸಂತ ಫಿಲೋಮಿನಾ ಕಾಲೇಜಿನಲ್ಲಿ 32 ಗಂಟೆಗಳ ಹ್ಯಾಕಥಾನ್ ಇನ್ನೊವೇಟ್ ಹ್ಯಾಕ್ 2K26 ಉದ್ಘಾಟನೆ

ಸಂತ ಫಿಲೋಮಿನಾ ಕಾಲೇಜಿನಲ್ಲಿ 32 ಗಂಟೆಗಳ ಹ್ಯಾಕಥಾನ್ ಇನ್ನೊವೇಟ್ ಹ್ಯಾಕ್ 2K26 ಉದ್ಘಾಟನೆ


ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಸ್ಟಾರ್ಟ್ ಅಪ್ ಕರ್ನಾಟಕ, ಕೆ-ಟೆಕ್ ಇನ್ನೊವೇಷನ್ ಹಬ್, ಕಾಲೇಜಿನ ನ್ಯೂ ಏಜ್ ಇನ್ಕ್ಯುಬೇಶನ್ ನೆಟ್ವರ್ಕ್ ಹಾಗೂ ಐಐಸಿಗಳ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನಲ್ಲಿ ಪ್ರಪ್ರಥಮವಾಗಿ ಆಯೋಜಿಸಲಾಗುತ್ತಿರುವ 32 ಗಂಟೆಗಳ ಹ್ಯಾಕಥಾನ್‌ಗೆ ಇಂದು ಕಾಲೇಜಿನ ಸ್ನಾತಕೋತ್ತರ ಸಭಾಭವನದಲ್ಲಿ ವಿಧ್ಯುಕ್ತ ಚಾಲನೆ ನೀಡಲಾಯಿತು. 


ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು, ‘ಯಶಸ್ವಿ ಜನರ ಜೀವನ ಮತ್ತು ಹೋರಾಟಗಳಿಂದ ನಾವು ಕಲಿಯಬೇಕಾದ ವಿಷಯಗಳು ಬಹಳಷ್ಟಿವೆ. ಪ್ರತಿಯೊಬ್ಬ ಸಾಧಕನ ಕಥೆಯು ನಮಗೆ ಜೀವನಪಾಠವನ್ನು ಕಲಿಸಿಕೊಡುತ್ತದೆ. ನಾವು ಯಾವಾಗಲೂ ಫಲಿತಾಂಶಗಳ ಬಗ್ಗೆ ಮಾತ್ರವೇ ಯೋಚಿಸುತ್ತೇವೆ ಆದರೆ ನಮ್ಮ ಗುರಿ ಮತ್ತು ಉದ್ದೇಶಗಳ ಬಗ್ಗೆ ಸ್ಪಷ್ಟತೆ ಇದ್ದು 100 ಪ್ರತಿಶತ ಪ್ರಯತ್ನಗಳನ್ನು ಮಾಡಿದರೆ ಖಂಡಿತವಾಗಿಯೂ ನಾವು ಯಶಸ್ವಿಯಾಗಬಹುದು. ನಾವು ಸಮಸ್ಯೆಗಳ ಸೃಷ್ಟಿಕರ್ತರು ಮತ್ತು ಸಮಸ್ಯೆ ವಿವರಣೆಕಾರರನ್ನು ಸಮಾಜದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಣಬಹುದು ಆದರೆ ಸಮಸ್ಯೆ ಪರಿಹರಿಸುವವರು ಬಹಳ ಕಡಿಮೆ. ಆದ್ದರಿಂದ ಸಮಸ್ಯೆ ವಿದ್ಯಾರ್ಥಿಗಳು ಪರಿಹರಿಸುವವರ ವರ್ಗದಲ್ಲಿರಬೇಕು. ಕಲ್ಪನೆಗಳನ್ನು ನಕಲಿಮಾಡುವ ಅನುಕರಣಕಾರರು ಹಲವರಿರುತ್ತಾರೆ. ಸಮಸ್ಯೆಗಳಿಗೆ ವಿನೂತನ ಪರಿಹರಿಸುವರಾಗಿ ಮುಂದೆ ಬಂದ ವಿದ್ಯಾರ್ಥಿಗಳ ತಂಡಗಳು ಪ್ರಶಂಸಾರ್ಹರು ಎಂದು ಹೇಳಿ ಪದವಿ ಹಾಗೂ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಕಲಿಕೆಯ ಸಂದರ್ಭದಲ್ಲಿ ನಾವೀನ್ಯತೆಯ ಕುರಿತು ಯೋಜನೆ ಮಾಡುವ ಅವಕಾಶಗಳನ್ನು ನೀಡುತ್ತಿರುವುದಕ್ಕೆ ಸಂಘಟಕರನ್ನು ಅಭಿನಂಧಿಸಿದರು. 


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸ್ಕೂಲ್ ಆಫ್ ಇಂಜಿನಿಯರಿಂಗ್, ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾನಿಲಯದ ಡೀನ್ ಡಾ. ರೂಬನ್ ಎಸ್. ಅವರು ‘ಸಮಸ್ಯೆ ಪರಿಹರಿಸುವವರು ತಮ್ಮ ಸುತ್ತಮುತ್ತಲಿನ ಪರಿಸರದಿಂದ ಪ್ರೇರಣೆ ಪಡೆಯುತ್ತಾರೆ. ಕೆಲವೊಮ್ಮೆ ಅವರು ಸ್ವತಃ ಎದುರಿಸುತ್ತಿರುವ ಸಮಸ್ಯೆಗಳಿಗೆ ವಿನೂತನವಾದ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ಸಮಸ್ಯೆ ಪರಿಹರಿಸುವ ಕೌಶಲ್ಯ ಬಹಳ ಮುಖ್ಯ, ಆದ್ದರಿಂದ ಅವರು ತಮ್ಮ ಶಿಕ್ಷಣದ ಆರಂಭಿಕ ಹಂತಗಳಲ್ಲಿಯೇ ಈ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಇದರ ಜೊತೆಗೆ ಅವರು ಸ್ಪಷ್ಟ ದೃಷ್ಟಿಕೋನವನ್ನು ಹೊಂದಿರಬೇಕು. ಹಾಗಿದ್ದಲ್ಲಿ ಮಾತ್ರವೇ ಅವರಿಗೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ನಾವು ಮಾಡುತ್ತಿರುವ ಕೆಲಸದ ಬಗ್ಗೆ ನಮಗೆ ಅಪರಿಮಿತ ಆಸಕ್ತಿ ಹಾಗೂ ಉತ್ಸಾಹವಿದ್ದಾಗ ನಾವು ಯಾವುದೇ ಕಷ್ಟಕರ ಸಂದರ್ಭಗಳಲ್ಲಿ ಎಂದಿಗೂ ಬಿಟ್ಟುಕೊಡುವುದಿಲ್ಲ ಏಕೆಂದರೆ ನಮ್ಮ ಉತ್ಸಾಹ ಹಾಗೂ ಆಸಕ್ತಿಗಳು ನಮ್ಮನ್ನು ಎಲ್ಲಾ ಕಷ್ಟಗಳನ್ನು ಧೈರ್ಯದಿಂದ ಎದುರಿಸುವಂತೆ ಮಾಡುತ್ತವೆ. ವಿದ್ಯಾರ್ಥಿಗಳು ಯಾವತ್ತೂ ಚೈತನ್ಯದ ಚಿಲುಮೆಗಳಾಗಿರಬೇಕು’ ಎಂದು ಹೇಳಿದರು.


ಸುರಭಿ ಮತ್ತು ಶ್ರೇಯಾ ಪ್ರಾರ್ಥಿಸಿದರು. ಕಾಲೇಜಿನ ನ್ಯೂ ಏಜ್ ಇನ್ಕ್ಯುಬೇಶನ್ ನೆಟ್ವರ್ಕ್‌ನ ಡಿಸ್ಟ್ರಿಕ್ಟ್ ಇನ್ನೊವೇಟಿವ್ ಅಸೋಸಿಯೇಟ್ ಅಭಿಷೇಕ್ ಸುವರ್ಣ ಸ್ವಾಗತಿಸಿದರು. ನ್ಯೂ ಏಜ್ ಇನ್ಕ್ಯುಬೇಶನ್ ನೆಟ್ವರ್ಕ್‌ನ ಪ್ರಾಜೆಕ್ಟ್ ಸಂಯೋಜಕ ಡಾ. ವಿನಯಚಂದ್ರ ವಂದಿಸಿದರು.


ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಪಿ.ಎಂ. ವೇಣುಗೋಪಾಲ್, ಕಾರ್ತಿಕ್ ಕೆ.ಆರ್., ಹವ್ಯಾಸ್, ಜೀವನ್, ದಿಶಾ ಪರ್ಲ್ ಮಸ್ಕರೇನಸ್ ಹಾಗೂ ಗೌರೀಶ್ ವಿದ್ಯಾರ್ಥಿಗಳ ತಂಡಗಳಿಗೆ ಮೆಂಟರ್‌ಗಳಾಗಿ ಭಾಗವಹಿಸಿದರು. ಕಾಲೇಜಿನ ಐಐಸಿ ಸಂಯೋಜಕಿ ಡಾ. ಗೀತಾ ಪೂರ್ಣಿಮಾ ಕೆ. ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಗಣಕವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಕ್ಷತಾ ಬಿ., ಸುರಕ್ಷಾ ಎಸ್., ನೀಲಮ್ ಕುಟ್ಟಪ್ಪ, ರಶ್ಮಿ ವಿ. ಹಾಗೂ ಶೋಧನ್ ಪಿ.ಜಿ. ಉಪಸ್ಥಿತರಿದ್ದರು.



32 ಗಂಟೆಗಳ ಕಾಲ ನಿರಂತರವಾಗಿ ನಡೆಯಲಿರುವ ಹ್ಯಾಕಥಾನ್‌ನಲ್ಲಿ ನಾಲ್ಕು ವಿದ್ಯಾರ್ಥಿಗಳನ್ನೊಳಗೊಂಡ 30 ತಂಡಗಳಿದ್ದು, ಪ್ರತೀ ತಂಡವೂ ಶಿಕ್ಷಣಕ್ಷೇತ್ರ, ಕೃಷಿ ಅಥವಾ ಸ್ಮಾರ್ಟ್ ಸಿಟಿ ಹಾಗೂ ಸ್ಥಿರತೆಯುಕ್ತ ಅಭಿವೃದ್ಧಿ ಎಂಬ ವಿಷಯಗಳಲ್ಲಿನ ಸಮಸ್ಯೆಗಳಿಗೆ ವಿನೂತನ ಪರಿಕಾರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಅವರಿಗೆ ಮಾರ್ಗದರ್ಶನ ನೀಡಲು ಕೃತಕ ಬುದ್ಧಿಮತ್ತೆ ಮುಂತಾದ ಕ್ಷೇತ್ರಗಳ ತಜ್ಞರು, ಉದ್ಯಮಕ್ಷೇತ್ರ ತಜ್ಞರು ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಮಾರ್ಗದರ್ಶನ ನೀಡಲಿದ್ದಾರೆ. ವಿದ್ಯಾರ್ಥಿಗಳಿಗೆ ನಿಶ್ಶುಲ್ಕ ನೋಂದಾವಣೆಗೆ ಅವಕಾಶವಿದ್ದು, ಪ್ರಥಮ ಹಂತದ ಮೌಲ್ಯಮಾಪನದ ಬಳಿಕ ಆಯ್ದ ಮೂವತ್ತು ತಂಡಗಳಿಗೆ ಅವಕಾಶ ನೀಡಲಾಗಿದೆ. ನಮ್ಮ ವಿದ್ಯಾರ್ಥಿಗಳ ಅಪರಿಮಿತ ಉತ್ಸಾಹ ಕಂಡು ಸಂತಸವಾಗುತ್ತಿದೆ. -ಅಭಿಷೇಕ್ ಸುವರ್ಣ, ಡಿಸ್ಟ್ರಿಕ್ಟ್ ಇನ್ನೊವೇಟಿವ್ ಅಸೋಸಿಯೇಟ್ ನ್ಯೂ ಏಜ್ ಇನ್ಕ್ಯುಬೇಶನ್ ನೆಟ್ವರ್ಕ್, ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಪುತ್ತೂರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article