ಉತ್ತಮ ಆರೋಗ್ಯದಿಂದ ಶೈಕ್ಷಣಿಕ ಪ್ರಗತಿ ಸಾಧ್ಯ: ದಿನಕರ ಹೇರೂರು
ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯ ಸಮನ್ವಯದಿಂದ ರಾಷ್ಟ್ರೀಯ ಜಂತು ಹುಳು ನಿವಾರಣೆ ಕಾರ್ಯಕ್ರಮವು ರಾಜ್ಯಾದ್ಯಂತ ಯಶಸ್ಸನ್ನು ಕಂಡಿದೆ. ಮಕ್ಕಳಲ್ಲಿ ಜಂತು ಹುಳುವಿನ ಬಾಧೆ ಗಣನೀಯವಾಗಿ ಕಡಿಮೆಯಾಗಿದ್ದು ಜಂತು ಹುಳು ನಿವಾರಣೆಯಲ್ಲಿ ಶೇ.90 ರಷ್ಟು ಪ್ರಗತಿ ಸಾಧಿಸಲಾಗಿದೆ. ಅಂಗನವಾಡಿಯ ಮಕ್ಕಳಿಂದ ಹಿಡಿದು ಪ್ರೌಢಶಾಲಾ ವಿಭಾಗದ ಮಕ್ಕಳವರೆಗೆ ಎಲ್ಲರಿಗೂ ಅಲ್‌ಬೆಂಡಜೋಲ್ ಮಾತ್ರೆಗಳನ್ನು ವರ್ಷಕ್ಕೆ ಎರಡು ಬಾರಿ ನೀಡಲಾಗುತ್ತಿದೆ. ಅಭಿಯಾನದ ದಿನದಂದು ತಪ್ಪಿ ಹೋದ ಮಕ್ಕಳಿಗೆ ಮನೆ ಭೇಟಿ ನೀಡುವ ಮೂಲಕ ಮಾತ್ರೆಗಳನ್ನು ತಲುಪಿಸಲಾಗುತ್ತಿದ್ದು, ಆಶಾ ಕಾರ್ಯಕರ್ತೆಯರು, ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಿದ್ದಾರೆ. ಇವರೆಲ್ಲರ ಕಾರ್ಯ ಅಭಿನಂದನೀಯ ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ್ ಹುಬ್ಬಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಅಲ್‌ಬೆಂಡಜೋಲ್ ಮಾತ್ರೆಗಳನ್ನು ಸೇವಿಸಬಹುದು, ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ವಿಶೇಷವಾಗಿ ಹೆಣ್ಣು ಮಕ್ಕಳು ಈ ಮಾತ್ರೆಗಳನ್ನು ಸೇವಿಸುವುದರಿಂದ ಭವಿಷ್ಯದಲ್ಲಿ ವೈವಾಹಿಕ ಬದುಕಿನಲ್ಲಿ ಎದುರಾಗಬಹುದಾದ ಅಪೌಷ್ಠಿಕತೆ ಮತ್ತು ರಕ್ತಹೀನತೆಯಂತಹ ಆರೋಗ್ಯ ಸಮಸ್ಯೆಗಳಿಂದ ಮುಕ್ತರಾಗಬಹುದು. ವಿದ್ಯಾರ್ಥಿಗಳು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮನೆಯಲ್ಲಿ ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು. ಆಹಾರ ಸೇವಿಸುವ ಮುನ್ನ ಕೈಗಳನ್ನು ತೊಳೆದುಕೊಳ್ಳುವ ಜೊತೆಗೆ ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಆರೋಗ್ಯವಂತರಾಗಬೇಕು. ಆರೋಗ್ಯ ಇಲ್ಲವಾದಲ್ಲಿ ಶಿಕ್ಷಣವೂ ಇರುವುದಿಲ್ಲ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಲೋಕೇಶ್ ಸಿ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಗಮನಹರಿಸಬೇಕು. ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಜಂತುಹುಳು ನಿವಾರಣೆಗೆ ವರ್ಷದಲ್ಲಿ ಎರಡು ಬಾರಿ ಜಂತುಹುಳು ನಿವಾರಣಾ ಮಾತ್ರೆಗಳನ್ನು ತಪ್ಪದೇ ಸೇವಿಸಬೇಕೆಂದರು.
ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಜೋತ್ಸ್ನಾ.ಬಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಂತು ಹುಳು ನಿವಾರಣೆ ಜಾಗೃತಿ ಕುರಿತು ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್, ಶಾಲಾ ಮುಖ್ಯೋಪಾಧ್ಯಾಯಿನಿ ಇಂದಿರಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಸ್ವಾಗತಿಸಿ, ಶಶಿಧರ್ ಹೆಚ್. ನಿರೂಪಿಸಿ, ಡಿಪಿಸಿ ಸುಧೀಂದ್ರ ವಂದಿಸಿದರು.
