ಸೆಂಟ್ ಫಿಲೊಮಿನಾ ಕಾಲೇಜಿನಲ್ಲಿ ಹುತಾತ್ಮರ ದಿನಾಚರಣೆ: ಮಹಾತ್ಮ ಗಾಂಧೀಜಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ
ಕಾರ್ಯಕ್ರಮದ ಆರಂಭದಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಂತರ ದೇಶಕ್ಕಾಗಿ ಬಲಿದಾನ ನೀಡಿದ ಹುತಾತ್ಮರ ಸ್ಮರಣಾರ್ಥ ಒಂದು ನಿಮಿಷ ಮೌನಾಚರಣೆ ಕೈಗೊಳ್ಳಲಾಯಿತು.
ಉಪಪ್ರಾಂಶುಪಾಲರಾದ ಡಾ. ವಿಜಯಕುಮಾರ್ ಮೊಳೆಯಾರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಹುತಾತ್ಮರ ದಿನದ ಮಹತ್ವದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಮುಖ್ಯ ಭಾಷಣವನ್ನು ಎಂ.ಎಸ್ಸಿ (ಗಣಿತ) ಪ್ರಥಮ ವರ್ಷದ ವಿದ್ಯಾರ್ಥಿನಿ ಶ್ರೀದೇವಿ ಎನ್. ನೀಡಿದರು. ಅವರು ಸ್ವಾತಂತ್ರ್ಯೋತ್ತರ ಭಾರತ ಮತ್ತು ಇಂದಿನ ಭಾರತದ ನಡುವಿನ ಅರ್ಥಪೂರ್ಣ ಹೋಲಿಕೆಯನ್ನು ಮಾಡಿದರು. ಸ್ವಾತಂತ್ರ್ಯದ ಆರಂಭಿಕ ವರ್ಷಗಳಲ್ಲಿ ದೇಶ ಎದುರಿಸಿದ ಸವಾಲುಗಳನ್ನು ವಿವರಿಸಿ, ಇಂದಿನ ಸ್ವತಂತ್ರ ರಾಷ್ಟ್ರದ ಅವಕಾಶಗಳು ಹಾಗೂ ಜವಾಬ್ದಾರಿಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಸ್ವಾತಂತ್ರ್ಯದ ಮೌಲ್ಯವನ್ನು ಅರಿತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವರಾದ ಡಾ. ವಿನಯಚಂದ್ರ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ ಸ್ಪಿಯರ್ಲ್ ಫಿಯೋನಾ ಪೆರೇರಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಯೂಸಫ್ ಅಲ್ಫಾಜ್ ಸ್ವಾಗತಿಸಿ, ಸಂಯುಕ್ತ ಕಾರ್ಯದರ್ಶಿ ಹಿಬಾ ಶೇಖ್ ವಂದಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಜಮ್ಮಿಲ್ ಐ. ಕಾರ್ಯಕ್ರಮ ನಿರ್ವಹಿಸಿ, ಅವನಿ ಮತ್ತು ಅಪರ್ಣಾ ಪ್ರಾರ್ಥನೆ ನಡೆಸಿದರು.
