ಸಿವಿಲ್ ನ್ಯಾಯಾಧೀಶರಾಗಿ ಪುತ್ತೂರಿನ ನಾಲ್ಕು ಮಂದಿ ಆಯ್ಕೆ
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ನಾಲ್ವರು ಹಿರಿಯ ವಿದ್ಯಾರ್ಥಿಗಳು ವಿಶಿಷ್ಟ ಸಾಧನೆ ಮಾಡುವ ಮೂಲಕ ವಿವೇಕಾನಂದ ಕಾನೂನು ಮಹಾವಿದ್ಯಾಲಯಕ್ಕೆ ಮೆರುಗು ತಂದಿದ್ದಾರೆ. ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ 2025ನೇ ಸಾಲಿನ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾದ ಒಟ್ಟು 83 ಸಾಧಕರಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ 4 ಹಿರಿಯ ವಿದ್ಯಾರ್ಥಿಗಳು ಸಿವಿಲ್ ನ್ಯಾಯಧೀಶರಾಗಿ ಆಯ್ಕೆಯಾಗಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಪ್ರಾಥಮಿಕ ಪರೀಕ್ಷೆ ನಡೆದು ಡಿಸೆಂಬರ್ ತಿಂಗಳಿನಲ್ಲಿ ಮುಖ್ಯ ಪರೀಕ್ಷೆ ಹಾಗೂ ಜನವರಿ ತಿಂಗಳಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಡೆದಿದ್ದ ನೇರ ಸಂದರ್ಶನದ ಮೂರು ಹಂತದ ಕಠಿಣ ಪರೀಕ್ಷೆಗಳನ್ನು ಪೂರೈಸಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ 2013-16 ಬ್ಯಾಚ್ನ 3 ವರ್ಷದ ಎಲ್.ಎಲ್.ಬಿ. ಪದವಿ ಪಡೆದ ದೀಪಿಕಾ ಎಸ್., 2013-18 ಬ್ಯಾಚ್ನಲ್ಲಿ ೫ ವರ್ಷದ ಬಿ.ಎ.ಎಲ್.ಎಲ್.ಬಿ. ಪಡೆದ ಮನೋಜ್ ಕುಮಾರ್ ಯು., 2016-19 ಬ್ಯಾಚ್ನಲ್ಲಿ 3 ವರ್ಷದ ಎಲ್.ಎಲ್.ಬಿ. ಪದವಿ ಪಡೆದಿದ್ದ ಧನ್ಯ ಎಂ.ಕೆ. ಹಾಗೂ 2019-24 ಬ್ಯಾಚ್ನಲ್ಲಿ 5 ವರ್ಷದ ಬಿ.ಎ. ಎಲ್.ಎಲ್.ಬಿ. ವ್ಯಾಸಂಗ ಮಾಡಿದ ಮಂಜುನಾಥ್ ಶಿವಲಿಂಗಪ್ಪ ಜಿ. ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗುವ ಮೂಲಕ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ್ದಾರೆ.
ಇದರೊಂದಿಗೆ ಒಟ್ಟು 26 ಹಿರಿಯ ವಿದ್ಯಾರ್ಥಿಗಳು ವಿವಿಧ ಹಂತದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾದ ಖ್ಯಾತಿಯನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯವು ಹೊಂದಿದೆ.