ಸಂತ ಫಿಲೋಮಿನಾ ಕಾಲೇಜಿನಲ್ಲಿ ಅಗ್ನಿಯಿಲ್ಲದೆ ಅಡುಗೆ ಸ್ಪರ್ಧೆ ‘ಮಾಸ್ಟರ್ ಮಿಕ್ಸ್ ಶೆಫ್ಸ್’
Saturday, February 28, 2026
ಪುತ್ತೂರು: ಸಂತ ಫಿಲೋಮಿನಾ ಕಾಲೇಜು(ಸ್ವಾಯತ್ತ), ಪುತ್ತೂರು ಇದರ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವತಿಯಿಂದ ಮಂಗಳವಾರ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ‘ಮಾಸ್ಟರ್ ಮಿಕ್ಸ್ ಶೆಫ್ಸ್’ ಎಂಬ ಶೀರ್ಷಿಕೆಯಲ್ಲಿ ಅಗ್ನಿಯಿಲ್ಲದೆ ಅಡುಗೆ ಸ್ಪರ್ಧೆ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಅವರು, ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಜೀವನ ಮೌಲ್ಯಗಳು ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು, ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಸೇವನೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವೆಂದು ಅವರು ತಿಳಿಸಿದರು.
ವಿವಿಧ ಸ್ನಾತಕೋತ್ತರ ವಿಭಾಗಗಳಿಂದ ಒಟ್ಟು 11 ವಿದ್ಯಾರ್ಥಿ ತಂಡಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿ, ತಮ್ಮ ಸೃಜನಶೀಲತೆ, ವಿನ್ಯಾಸ ಕೌಶಲ್ಯ ಹಾಗೂ ಪೌಷ್ಟಿಕ ಅರಿವು ಪ್ರದರ್ಶಿಸಿದರು.
ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರತಿಭಾ ಸ್ವಾಗತಿಸಿ, ಸ್ಪರ್ಧೆಯ ಉದ್ದೇಶವನ್ನು ವಿವರಿಸಿ ವಂದಿಸಿದರು. ವಿವಿಧ ಸ್ನಾತಕೋತ್ತರ ವಿಭಾಗಗಳ ಸಂಯೋಜಕರು, ಅಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಂಯೋಜಕಿ ಶ್ರೀಮಣಿ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.


