ಚಲಿಸುತ್ತಿದ್ದ ವಾಹನಕ್ಕೆ ಆಕಸ್ಮಿಕ ಬೆಂಕಿ: ಪ್ರಯಾಣಿಕರು ಪವಾಡಸದೃಶವಾಗಿ ಬಚಾವ್
Wednesday, February 11, 2026
ಶಿರ್ವ: ಮಂಗಳೂರಿಗೆ ಹೋಗಿದ್ದ ಶಿರ್ವದ ನ್ಯಾರ್ಮಾ ಪದವು ಸಮೀಪದ ನಿವಾಸಿ ಮಾರ್ಟಿನ್ ಡಿಸೋಜಾ ಇವರು ತಮ್ಮ ಕಾರ್ಯಕ್ರಮ ಮುಗಿಸಿ ಮನೆಗೆ ಸಮೀಪಿಸುತ್ತಿದ್ದಂತೆ ಅನತಿ ದೂರದಲ್ಲಿಯೇ ಸೋಮವಾರ ರಾತ್ರಿ ಎರಡು ಗಂಟೆಯ ಸುಮಾರಿಗೆ ಕಾರಿನ ಇಂಜಿನ್ ಭಾಗದಿಂದ ಹೊಗೆ ಬರುತ್ತಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ಕಾರು ನಿಲ್ಲಿಸಿ ಕಾರಿನಲ್ಲಿದ್ದ ಕುಟುಂಬದ ನಾಲ್ವರು ಸದಸ್ಯರನ್ನು ತಕ್ಷಣವೇ ಸುರಕ್ಷಿತವಾಗಿ ಹೊರಗಿಳಿಯುವಂತೆ ಸೂಚಿಸಿದ್ದಾರೆ. ಮನೆಯವರೆಲ್ಲ ಕಾರಿನಿಂದ ಹೊರ ಬಂದ ಕೆಲವೇ ಕ್ಷಣದಲ್ಲಿ ಕಾರು ಹೊತ್ತಿ ಉರಿದಿದೆ.
ಪ್ರಯಾಣಿಕರ ಬೊಬ್ಬೆ ಹಾಗೂ ಉರಿಯುವ ಶಬ್ದಕ್ಕೆ ಎಚ್ಚರಗೊಂಡ ಸಮೀಪದ ಮನೆಯವರು ಸ್ಥಳಕ್ಕೆ ಧಾವಿಸಿ ಬಂದಿದ್ದು, ಮನೆಗಳಿಂದ ಪೈಪ್ ಮೂಲಕ ನೀರು ಹಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಫಲಕಾರಿಯಾಗಿಲ್ಲ. ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮಂಗಳವಾರ ಶಿರ್ವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆಯ ಮಹಜರು ನಡೆಸಿ ಕಾರಿನ ಅಸ್ಥಿಪಂಜರವನ್ನು ಸಂಬಂಧಪಟ್ಟವರಿಗೆ ಬಿಟ್ಟುಕೊಟ್ಟಿದ್ದಾರೆ.