ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರವಾಸಿಗರು ಬೋಟ್ ಗಳಲ್ಲಿ ಸಂಚರಿಸುವಾಗ ಲೈಫ್ ಜಾಕೆಟ್ ಅನ್ನು ತಪ್ಪದೆ ಧರಿಸಿ ಪ್ರಯಾಣಿಸಬೇಕು. ತಪ್ಪಿದ್ದಲ್ಲಿ ಅಂತಹವರ ಮೇಲೆ ದಂಡ ವಿಧಿಸಲಾಗುವುದು ಎಂದ ಅವರು, ಲೈಫ್ ಜಾಕೆಟ್ ಧರಿಸಿದರೆ ಮಾತ್ರ ಬೋಟ್‌ಗಳ ಮಾಲೀಕರು ಬೋಟ್ ಚಲಾಯಿಸಬೇಕು. ಈ ಬಗ್ಗೆ ಕರಾವಳಿ ಕಾವಲು ಪಡೆಯವರು ಆಗಿಂದಾಗ್ಗೆ ಪರಿಶೀಲಿಸಬೇಕು ಎಂದರು.
ಜಿಲ್ಲೆಯಲ್ಲಿರುವ ಕಡಲ ತೀರಗಳಾದ ಮಲ್ಪೆ ಬೀಚ್, ಸೈಂಟ್ ಮೇರಿಸ್ ದ್ವೀಪ ಪ್ರದೇಶದಲ್ಲಿ ಪ್ರವಾಸಿಗರ ರಕ್ಷಣೆಯ ಉದೇಶಕ್ಕಾಗಿ ವಾಚ್ ಟವರ್ ನಿರ್ಮಾಣ, ಹೊರ್ಡಿಂಗ್ ಬೋರ್ಡ್ ಅಳವಡಿಕೆ, ಮಾಹಿತಿ ಫಲಕ, ಸಾರ್ವಜನಿಕ ಸೂಚನಾ ಫಲಕ, ಎಚ್ಚರಿಕೆಯ ಫಲಕ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಡುಪಿ ತಾಲೂಕಿನ ಕದಿಕೆ ಗ್ರಾಮದ ಕಡಲ ತೀರದ ನಿರ್ವಹಣೆ, ಸಮಗ್ರ ಅಭಿವೃದ್ಧಿ, ಜಲ ಸಾಹಸ ಚಟುವಟಿಕೆಗಳು ಹಾಗೂ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರಯಾಣಿಕರ ದೋಣಿ ಸೇವೆಯನ್ನು ಟೆಂಡರ್ ಕರೆದು, ಶೇಕಡವಾರು ಹಂಚಿಕೆ ಆಧಾರದಲ್ಲಿ ನೀಡಬೇಕು ಎಂದ ಅವರು, ಮಲ್ಪೆ ಬೀಚ್ ಹಾಗೂ ಸೀವಾಕ್ ಪ್ರದೇಶಗಳಲ್ಲಿ ಅಂಗಡಿಗಳನ್ನು ಹಾಗೂ ಇಲ್ಲಿನ ಸ್ವಚ್ಛತೆ ಮತ್ತು ನಿರ್ವಹಣೆಯನ್ನು ಟೆಂಡರ್ ಪ್ರಕ್ರಿಯೆಯನ್ನು ಕರೆದು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಬೀಚ್‌ಗಳಲ್ಲಿ ಜಲ ಕ್ರೀಡೆ ಸೇರಿದಂತೆ ಮತ್ತಿತರ ಜಲ ಸಾಹಸ ಕ್ರೀಡೆಗಳನ್ನು ಜಿಲ್ಲೆಯಲ್ಲಿ ಯಾವ ಬೀಚ್ ಗಳಲ್ಲಿ ಆಯೋಜಿಸುವುದು ಸೂಕ್ತ ಎಂಬ ವರದಿಯನ್ನು ನೀಡಲು ಕಳೆದ ವರ್ಷ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವಾಟರ್ ಸ್ಪೋರ್ಟ್ಸ್ಗೆ ವರದಿ ನೀಡಲು ಸೂಚಿಸಲಾಗಿತ್ತು, ಆದರೆ ಈ ವರೆಗೆ ವರದಿ ನೀಡಿರುವುದಿಲ್ಲ, ಅದನ್ನು ಕೂಡಲೇ ಪಡೆಯಬೇಕು ಎಂದ ಅವರು, ಪ್ರವಾಸಿಗರ ಜೀವ ರಕ್ಷಣೆಗೆ ಅಗತ್ಯವಿರುವ ಜೆಟ್ ಸೀ ಬೈಕ್ ಅನ್ನು ಸರಬರಾಜು ಮಾಡಲು ಕೆ. ಆರ್. ಡಿ. ಎಲ್ ಮುಖಾಂತರ ಟೆಂಡರ್ ಕರೆಯಲಾಗಿತ್ತು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಶಾಸಕ ಯಶ್ ಪಾಲ್ ಎ. ಸುವರ್ಣ ಮಾತನಾಡಿ, ಮಲ್ಪೆ ಬೀಚ್‌ನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಸ್ಥಳೀಯ ಸಂಪ್ರದಾಯಿಕ ಮೀನುಗಾರರು, ಮೀನುಗರಿಕೆ ಚಟುವಟಿಕೆಗಳನ್ನು ಕೈಗೊಳ್ಳಲು ತೊಂದರೆಯಾಗದAತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸಭೆಯ ಗಮನಕ್ಕೆ ತಂದರು.
ಜಿಲ್ಲೆಯ ಪ್ರವಾಸಿ ತಾಣಗಳನ್ನು ಸವಿಯಲು ಆಗಮಿಸುವ ಪ್ರವಾಸಿಗರಿಗೆ ಕಡಲ ತೀರದ ಮಾಹಿತಿ ಕೊರತೆಯಿಂದಾಗಿ ಕೆಲವು ಅವಘಡಗಳು ಉಂಟಾಗುತ್ತಿವೆ, ಹೀಗಾಗದಂತೆ ಎಚ್ಚರಿಕೆಯ ಫಲಕಗಳನ್ನು ಅಳವಡಿಸುವುದರ ಜೊತೆಗೆ ಮತ್ತಿತರ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕುಂದಾಪುರದ ಕೋಡಿ ಕಡಲ ಕಿನಾರೆಯಲ್ಲಿರುವ ಸೀ ವಾಕ್‌ನಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಉದ್ಯಾನವನ ನಿರ್ಮಾಣ, ಸಮುದ್ರ ವೀಕ್ಷಣೆಗೆ ಕುಳಿತುಕೊಳ್ಳಲು ಬೆಂಚ್ ಸೇರಿದಂತೆ ಮತ್ತಿತರ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದರು.
ಬೀಚ್ ಹಾಗೂ ದ್ವೀಪಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಸರಕಾರದ ವತಿಯಿಂದ ಕೈಗೊಳ್ಳಲು ಸಾಧ್ಯ ವಾಗದೆ ಇದ್ದಲ್ಲಿ ಖಾಸಗಿ ಸಹಭಾಗೀತ್ವದಲ್ಲಿ ಅಭಿವೃದ್ಧಿ ಪಡಿಸಲು ಆಲೋಚಿಸುವುದು ಸೂಕ್ತ ಸಲಹೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂದ್ಯಾ ಎನ್.ಎಮ್, ಟೂರಿಸಮ್ ಅಶೋಸಿಯೇಷನ್ ನ ಮನೋಹರ್ ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
