ಮಾನವ ಕಳ್ಳ ಸಾಗಾಣಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪ್ರಕರಣಗಳಾಗದಂತೆ ಎಚ್ಚರ ವಹಿಸಿ: ಮನು ಪಟೇಲ್ ಬಿ.ವೈ.
ಅವರು ಇಂದು ನಗರದ ಬ್ರಹ್ಮಗಿರಿಯ ಜಿಲ್ಲಾ ಬಾಲಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕುರಿತು ಕ್ಷೇತ್ರ ಮಟ್ಟದ ವಿವಿಧ ಇಲಾಖೆಯ ಭಾಗೀದಾರರಿಗೆ ನಡೆದ ಒಂದು ದಿನದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆರ್ಥಿಕ ಸಮಸ್ಯೆ, ಕುಟುಂಬದಲ್ಲಿ ಭಿನ್ನಾಭಿಪ್ರಾಯ ಸೇರಿದಂತೆ ಹಲವು ಕಾರಣಗಳಿಗೆ ಸಿಲುಕಿದ ಮಹಿಳೆಯರ ಹಾಗೂ ಮಕ್ಕಳನ್ನೇ ಗುರಿಯಾಗಿಸಿಕೊಂಡು ಉತ್ತಮ ಜೀವನ ಕಲ್ಪಿಸುವುದಾಗಿ ಅವರುಗಳ ಮನವೊಲಿಸಿ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಮಾಡಿ, ಭಿಕ್ಷಾಟನೆ, ಲೈಂಗಿಕ ದೌರ್ಜನ್ಯ ಸೇರಿದಂತೆ ಮತ್ತಿತರ ಹೇಯ ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸ್ ಇಲಾಖೆಯು ಸಮನ್ವಯತೆ ಹೊಂದಿ, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ದುರ್ಬಲ ಸ್ಥಿತಿಯಲ್ಲಿ ಯಾವುದೇ ಕುಟುಂಬದವರು ವಾಸಿಸುತ್ತಿದ್ದಲ್ಲಿ ಅವರುಗಳ ಮೇಲೆ ನಿಗಾ ವಹಿಸಬೇಕು ಎಂದ ಅವರು, ಕ್ಷೇತ್ರ ಮಟ್ಟದ ಭಾಗೀದಾರರು ತಮ್ಮ ಕಾಯಕ್ಷಮತೆ, ಕಾರ್ಯವ್ಯಾಪ್ತಿಯನ್ನು ಅರಿತು ಕೆಲಸ ನಿರ್ವಹಿಸಿದ್ದಲ್ಲಿ ಮುಂದಿನ ಪೀಳಿಗೆಗೆ ಉತ್ತಮ ಸಮಾಜ ಕಟ್ಟಿಕೊಳ್ಳಲು ದಾರಿಯಾಗಲಿದೆ ಎಂದರು.
ದೇಶದಲ್ಲಿ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಸೇರಿದಂತೆ ಮತ್ತಿತರ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ವ್ಯವಸ್ಥಿತ ಕಾನೂನುಗಳು ಜಾರಿಯಲ್ಲಿದ್ದರೂ ಸಹ ಕಾನೂನುಗಳ ಅರಿವು ಹಾಗೂ ಸಮನ್ವಯದ ಕೊರತೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಸಾಧ್ಯವಾಗಿರುವುದಿಲ್ಲ. ಕಾನೂನುಗಳ ಸದುಪಯೋಗ ಹಾಗೂ ಅವುಗಳನ್ನು ಬಳಸಿಕೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ತರಬೇತಿಯಲ್ಲಿ ಪಡೆದ ಮಾಹಿತಿಯನ್ನು ಭಾಗೀದಾರ ಇಲಾಖೆಯ ಅಧಿಕಾರಿಗಳು ಕ್ಷೇತ್ರಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ನೇರವಾಗಿ ಕಣ್ಣಿಗೆ ಗೋಚರಿಸುವ ವಿಷಯವಲ್ಲ. ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ರಕ್ಷಣಾ ಸಮಿತಿಗಳನ್ನು ರಚಿಸಲಾಗಿದ್ದು, ರಕ್ಷಣಾ ಸಮಿತಿಗಳೊಂದಿಗೆ ವಿವಿಧ ಇಲಾಖೆಗಳು ತಮ್ಮ ಜವಾಬ್ದಾರಿಯನ್ನು ಅರಿತು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅನುರಾಧ ಹಾದಿಮನೆ ಪ್ರಾಸ್ತಾವಿಕವಾಗಿ ಮಾತನಾಡಿ, ಜೀತಪದ್ಧತಿ, ಲೈಂಗಿಕ ದೌರ್ಜನ್ಯ, ಭಿಕ್ಷಾಟನೆ ಸೇರಿದಂತೆ ಮತ್ತಿತರ ದುಷ್ಕೃತ್ಯಗಳಿಗೆ ಬಳಸಿಕೊಳ್ಳಲು ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಟ ಮಾಡುತ್ತಿದ್ದು, ಈ ಕೃತ್ಯಗಳಿಗೆ ಕಡಿವಾಣ ಹಾಕಲು, ಕಾನೂನುಗಳನ್ನು ತಳ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಕ್ಷೇತ್ರ ಮಟ್ಟದ ವಿವಿಧ ಇಲಾಖೆಗಳ ಭಾಗೀದಾರರಿಗೆ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ನೇಟಿವ್ ಆರ್ಗನೈಜೇಶನ್ ವ್ಯವಸ್ಥಾಪಕ ಪ್ರೇಮಾನಂದ ಕಲ್ಮಾಡಿ ಅವರು ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕುರಿತ ಕ್ರಮಬದ್ಧ ಕಾರ್ಯವಿಧಾನವನ್ನು ಹಾಗೂ ವಕೀಲೆ ಭಾನುಮತಿ ಅವರು ಇಮ್ಮೋರಲ್ ಟ್ರಾಫಿಕಿಂಗ್ ಪ್ರಿವೆನ್ಶನ್ ಅಕ್ಟ್ ೧೯೫೬ ಕಾಯ್ದೆ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನದ ಅಂಗವಾಗಿ ಪ್ರಮಾಣ ವಚನ ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವಿವಿಧ ಇಲಾಖೆಗಳ ಶಿಬಿರಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಜೆಂಡರ್ ಸ್ಪೆಷಲಿಸ್ಟ್ ದೀಪಾ ನಿರೂಪಿಸಿ, ವಂದಿಸಿದರು.
