ಧರ್ಮಸ್ಥಳದಲ್ಲಿ ಮಹಾಶಿವರಾತ್ರಿ ಪಾದಯಾತ್ರಿಗಳಿಗೆ ಮಾಹಿತಿ ಕಚೇರಿ ಉದ್ಘಾಟನೆ
ಕ್ಷೇತ್ರದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಈ ಬಾರಿ ಫೆ.15 ರಂದು ಮಹಾಶಿವರಾತ್ರಿ ನಡೆಯಲಿದ್ದು, ಬೆಂಗಳೂರು ಸಹಿತ ರಾಜ್ಯದ ನಾನಾ ಭಾಗಗಳಿಂದ ಸಹಸ್ರ ಸಹಸ್ರ ಭಕ್ತಾದಿಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಚಾರ್ಮಾಡಿ, ಕೊಕ್ಕಡ ಮೂಲಕ ಆಗಮಿಸಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಈಗಾಗಲೇ ನೂರಾರು ತಂಡಗಳು ಹಾದಿ ಕ್ರಮಿಸಿ ಧರ್ಮಸ್ಥಳ ಸಮೀಪಿಸುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರಿಗಳಿಗೆ ಸಮಿತಿ ಮೂಲಕ ಹಾದಿಬದಿಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಅಲ್ಲಲ್ಲಿ ವಿವಿಧ ಸಂಘ ಸಂಸ್ಥೆಗಳು ಪಾದಯಾತ್ರಿಗಳಿಗೆ ಪಾನೀಯದ ಕೌಂಟರ್ ತೆರೆದು ಅವರ ದಾಹವನ್ನು ತಣಿಸುವ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಉಜಿರೆಯ ಎಸ್‌ಡಿಎಂ ಆಸ್ಪತ್ರೆಯ ಮೂಲಕ ಪಾದಯಾತ್ರಿಗಳಿಗೆ ಚಾರ್ಮಾಡಿ, ಮುಂಡಾಜೆ, ಕಳ್ಮಂಜ, ಉಜಿರೆ ಮತ್ತಿತರ ಕಡೆಗಳಲ್ಲಿ ಉಚಿತ ಅರೋಗ್ಯ ಸೇವೆ ನೀಡಲು ಸೇವಾ ಕೇಂದ್ರ ತೆರೆಯಲಾಗಿದೆ.
ಸ್ವಚ್ಛತೆಗೆ ಆದ್ಯತೆ:
ಪಾದಯಾತ್ರಿಗಳು ಸಂಚರಿಸುವ ರಸ್ತೆಯುದ್ದಕ್ಕೂ ಸ್ವಚ್ಛತೆಯ ಬಗ್ಗೆ ಗಮನ ಹರಿಸಿ ಆದ್ಯತೆ ನೀಡುವಂತೆ ಕ್ಷೇತ್ರದ ವತಿಯಿಂದ ವಿನಂತಿಸಲಾಗಿದೆ. ಊಟದ ತಟ್ಟೆ, ಪ್ಲಾಸ್ಟಿಕ್, ಇತ್ಯಾದಿಗಳನ್ನು ಅಲ್ಲಲ್ಲಿ ಎಸೆಯದೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿರುವುದರಿಂದ ಪಾದಯಾತ್ರಿಗಳು ನಿಧಾನವಾಗಿ ರಸ್ತೆಯ ಎಡಬದಿಯಲ್ಲೇ ಸಾಗುವಂತೆ ಸೂಚಿಸಲಾಗಿದೆ. ಕೆಲ ಪಾದಯಾತ್ರಿ ತಂಡಗಳು ರಸ್ತೆ ಬದಿಯ ಅರಣ್ಯ ಜಾಗದಲ್ಲಿ ಗಿಡಗಳನ್ನು ನೆಡುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿವೆ.