ಕುಣಿತ ಭಜನೆಯಲ್ಲಿದೆ ಭಕ್ತಿ-ಶಕ್ತಿ: ಡಾ. ಹೆಗ್ಗಡೆ
ಧರ್ಮಸ್ಥಳ ಗ್ರಾಮದ ನಾರ್ಯ ಸುಜ್ಞಾನ ಭವನ ವಠಾರದಲ್ಲಿ ಫೆ.೭ ರಂದು ನೃತ್ಯ ಭಜನಾ ಕಮ್ಮಟೋತ್ಸವ, ಸಾರ್ವಜನಿಕ ಸತ್ಯನಾರಾಯಣ ಪೂಜೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿ ಮಾತನಾಡಿದ ಅವರು, ಕುಣಿತ ಭಜನೆಯಲ್ಲಿ ಎಷ್ಟು ಹೊತ್ತು ಕುಣಿದರೂ ಆಯಾಸವಾಗುವುದಿಲ್ಲ. ಏಕೆಂದರೆ ಆ ಭಕ್ತಿಯಲ್ಲಿ ಶಕ್ತಿ ಇದೆ. ಈ ಕಮ್ಮಟದಲ್ಲಿ ಸಣ್ಣ ಸಣ್ಣ ಮಕ್ಕಳು ಭಾಗವಹಿಸಿದ್ದಾರೆ. ಅವರನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಇಂತಹ ಕಾರ್ಯಕ್ರಮವನ್ನು ಊರಿನವರು ಒಟ್ಟು ಸೇರಿ ಮಾಡಬೇಕು. ಇಡೀ ಊರಿಗೆ ಒಳ್ಳೆದಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.
ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡಿ, ನಾನು ನಾನು ಎಂಬ ಮನಸ್ಥಿತಿಯನ್ನು ಬಿಟ್ಟು ನಾವು ನಾವು ಎಂಬ ಭಾವನೆಯಲ್ಲಿ ಬದುಕೋಣ. ಅಣ್ಣ ತಮ್ಮ ಎಂಬ ಭಾವನೆ ಇರಬೇಕು. ಸರಳತೆ ಹಾಗೂ ಸಜ್ಜನಿಕೆ ಸುಂದರ ಬದುಕಿನ ಆಧಾರ ಸ್ತಂಭ. ಈ ನಿಟ್ಟಿನಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿ ಉಳಿಯುವಂತಹ ದೊಡ್ಡ ಕೆಲಸಕ್ಕೆ ಕೈ ಹಾಕಿದ್ದೀರಿ. ನಾವೆಲ್ಲ ಒಂದು ಒಳ್ಳೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಸಂತಸ ವ್ಯಕ್ತಪಪಡಿಸಿದರು.
ಶಾಸಕ ಹರೀಶ್ ಪೂಂಜ, ಎಸ್‌ಕೆಡಿಆರ್‌ಡಿಪಿ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್., ಧರ್ಮಸ್ಥಳ ಅನ್ನಪೂರ್ಣ ಛತ್ರದ ಸುಬ್ರಮಣ್ಯ ಪ್ರಸಾದ್, ಪಿಲಿಗೂಡು ಪದ್ಮನಾಭ ಶಿಲ್ಪಿ, ಅವಿನಾಶ್ ಶೆಟ್ಟಿ, ಹರ್ಷ ಹೆಗ್ಡೆ, ಪುರಂದರ ರಾವ್, ಸೌಮ್ಯ ಬೇಕಲ್, ಉಷಾ ಹೆಬ್ಬಾರ್ ಉಡುಪಿ, ಪ್ರಶಾಂತ್ ಜೈನ್, ಶೌರ್ಯ ವಿಪತ್ತು ತಂಡದ ಸದಸ್ಯರು, ಯೋಜನಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಮನೆಯಲ್ಲಿಯೂ ಇಂತಹ ಭಜನೆ ಕಾರ್ಯಕ್ರಮವನ್ನು ಪ್ರತಿನಿತ್ಯ ಮಾಡಬೇಕು. ಕಮ್ಮಟ ಕುಣಿತ ಭಜನೆಯಲ್ಲಿ ಶಿಸ್ತು, ಉಲ್ಲಾಸ ಮತ್ತು ಆವೇಶ ಇದೆ. ಮಕ್ಕಳಿಗೆ ಇಂದ್ರಿಯದ ಮೇಲೆ ನಿಯಂತ್ರಣ ಬರುತ್ತದೆ. ಭಕ್ತಿ ಹೆಚ್ಚಾದಂತೆ ಆಯಾಸ ಕಮ್ಮಿ. ಇಂತಹ ಕಾರ್ಯಕ್ರಮ ಯಾವಾಗಲೂ ನಡೆಯುತ್ತಿರಲಿ. ಬೇರೆ ಬೇರೆ ಊರಿನಿಂದ ಸಮವಸ್ತ್ರದಲ್ಲಿ ಆಗಮಿಸಿದ್ದೀರಿ. ಭಜನೆ ಮಾಡುವಾಗ ನಿಯಮದಿಂದ ಮಾಡಿದರೆ ತುಂಬಾ ಸಂತೋಷ. ಊರಿನಲ್ಲಿ ಯಾವುದೇ ಕಾರ್ಯಕ್ರಮ ಆದರೆ ಬೇರೆಯವರನ್ನು ಕರೆಯಬೇಕೆಂದಿಲ್ಲ. ಇವರೇ ಹೋಗಿ ನೃತ್ಯ ಭಜನೆಯನ್ನು ಮಾಡುತ್ತಾರೆ. -ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ.