ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರವಾದ ಕರ್ನಾಟಕ ಗ್ರಾಮೀಣ ಬ್ಯಾಂಕ್
ಗ್ರಾಮೀಣ ಆರ್ಥಿಕ ಸಬಲೀಕರಣದಲ್ಲಿ ಅದರಲ್ಲೂ ಸ್ವ ಸಹಾಯ ಸಂಘಗಳ ಮೂಲಕ ಬ್ಯಾಂಕು ಕೈಗೊಂಡ ಕಾರ್ಯವನ್ನು ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಪುರಸ್ಕರಿಸಿದೆ.
ಕರ್ನಾಟಕ ಗ್ರಾಮೀಣ ಬ್ಯಾಂಕು ಈ ವರೆಗೆ 80904 ಸ್ವ ಸಹಾಯ ಸಂಘಗಳನ್ನು ಬ್ಯಾಂಕ್ ಸಾಲ ಸಂಪರ್ಕಕ್ಕೆ ತಂದಿದ್ದು 2835 ಕೋಟಿ ರೂ. ಸಾಲ ವಿತರಿಸಿದೆ. ಬ್ಯಾಂಕಿನ ಈ ಸಾಧನೆಯನ್ನು ಪರಿಗಣಿಸಿರುವ ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಇತ್ತೀಚೆಗೆ ಹೈದರಾಬಾದ್ ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹಣಕಾಸು ಸಾಕ್ಷರತೆ ಮತ್ತು ಸಾಮರ್ಥ್ಯವರ್ಧನೆ ಕುರಿತ ಸಮಾವೇಶ ಹಾಗೂ 25ನೇ ಕೇಂದ್ರ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಈ ಗೌರವ ನೀಡಲಾಗಿದೆ. ಬ್ಯಾಂಕಿನ ಪರವಾಗಿ ಈ ಪುರಸ್ಕಾರವನ್ನು ಬ್ಯಾಂಕ್ ಮಹಾ ಪ್ರಬಂಧಕಿ ಶ್ರೀಮತಿ ರುಕ್ಮಿಣಿದೇವಿ ಸ್ವೀಕರಿಸಿದರು.
ಪ್ರಶಸ್ತಿ ಬಂದುದಕ್ಕೆ ಸಂತಸ ವ್ಯಕ್ತಪಡಿಸಿರುವ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಎಮ್ ಭಂಡಿವಾಡ ಈ ಪ್ರಶಸ್ತಿ ಕರ್ನಾಟಕ ಗ್ರಾಮಿಣ ಬ್ಯಾಂಕಿನ ಗ್ರಾಮೀಣಾಭಿವ್ರದ್ಧಿ ಮತ್ತು ಆರ್ಥಿಕ ಸೇರ್ಪಡೆಯಲ್ಲಿನ ಮುಂಚೂಣಿ ಕಾರ್ಯವನ್ನು ಮತ್ತೊಮ್ಮೆ ದೃಢಪಡಿಸಿದೆ. ಗ್ರಾಮೀಣ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಒಂದು ರಾಜ್ಯ ಒಂದು ಗ್ರಾಮೀಣ ಬ್ಯಾಂಕ್ ನೀತಿಯನ್ವಯ ರಾಜ್ಯದ ಎರೆಡೂ ಗ್ರಾಮೀಣ ಬ್ಯಾಂಕುಗಳನ್ನು ಒಗ್ಗೂಡಿಸಲಾಗಿದ್ದು ಪ್ರಾದೇಶಿಕ ಅಭಿವೃದ್ಧಿಗೆ ಹೆಚ್ಚಿನ ಬಲ ಬಂದಂತಾಗಿದೆ. ದೀನದಯಾಳ ಅಂತ್ಯೋದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಶನ್ ಉದ್ದೇಶಗಳಿಗನುಗುಣವಾಗಿ ಸ್ವ ಸಹಾಯ ಗುಂಪುಗಳ ಮೂಲಕ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಬ್ಯಾಂಕು ನಿರಂತರವಾಗಿ ಶ್ರಮಿಸುತ್ತಿದ್ದು ಈ ವರೆಗೆ 80904 ಗುಂಪುಗಳ ಮೂಲಕ 2835 ಕೋಟಿ ಸಾಲ ವಿತರಿಸಲಾಗಿದೆ ಎಂದರು. ಪ್ರಶಸ್ತಿ ಜವಾಬ್ದಾರಿಯನ್ನು ಹೆಚ್ಚಿಸಿದ್ದು ಮುಂಬರುವ ದಿನಗಳಲ್ಲಿ ಬ್ಯಾಂಕು ಇನ್ನೂ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಲಿದೆ ಎಂದರು.