ಮನೆಗಳ್ಳತನ ಆರೋಪಿಯ ಬಂಧನ
Saturday, March 28, 2026
ಕುಂದಾಪುರ: ಹೆಮ್ಮಾಡಿ-ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಸ್ಕೂಟರ್ ನಲ್ಲಿ ವೀಲಿಂಗ್ ಮಾಡುತ್ತಿದ್ದ ವ್ಯಕ್ತಿಯೊರ್ವನ ವಿರುದ್ಧ ಕುಂದಾಪುರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಈತನನ್ನು ಪೌಜಾನ್ ಅಹಮದ್ ಎಂದು ಗುರುತಿಸಲಾಗಿದೆ.
ಮನೆಗಳ್ಳತನ ಪ್ರಕರಣದಲ್ಲಿ ಈತ ಬೈಂದೂರು ಪೊಲೀಸರಿಗೆ ಬೇಕಾಗಿದ್ದು, ಅವರು ಬಂಧಿಸಿದಾಗ ಇವನು ವೀಲಿಂಗ್ ವೀರ ಎಂಬ ಬಗ್ಗೆ ಗೊತ್ತಾಯಿತು.
ಶಿರೂರು ಗ್ರಾಮದ ಕೋಣಮಕ್ಕಿ ನಿವಾಸಿ ಪಾತಿಮಾ ಎಂಬುವವರ ಮನೆಯಲ್ಲಿ ಈತ ಕಳವು ನಡೆಸಿದ್ದ. ಪಾತಿಮಾ ಅವರು ರಾತ್ರಿ ಗಾಢ ನಿದ್ರೆಯಲ್ಲಿದ್ದಾಗ, ಆರೋಪಿ ಪೌಜಾನ್ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ್ದಾನೆ. ಮನೆಯಲ್ಲಿದ್ದ ಗೋದ್ರೇಜ್ ಅಲಮಾರನ್ನು ತೆರೆದು ನಗದು ಹಾಗೂ ಚಿನ್ನಾಭರಣಕ್ಕಾಗಿ ಜಾಲಾಡುತ್ತಿದ್ದನು. ಈ ವೇಳೆ ಮನೆಯವರು ಎಚ್ಚರಗೊಂಡು ಜೋರಾಗಿ ಬೊಬ್ಬೆ ಹಾಕಿದ್ದರಿಂದ ಗಾಬರಿಗೊಂಡ ಆರೋಪಿ ಬಂದ ದಾರಿಯಲ್ಲೇ ಪರಾರಿಯಾಗಿದ್ದನು.
ಈ ಸಂಬಂಧ ಫಾತಿಮಾ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಫೋಜಾನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ರೀತಿಯಲ್ಲಿ ಸ್ಕೂಟರ್ ವೀಲಿಂಗ್ ನಡೆಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಾರ್ವಜನಿಕರು ಈತನ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.