ಜ್ಞಾನವನ್ನು ಸಮಾಜಕ್ಕೆ ಧಾರೆಯೆರಿಯಿರಿ: ರಾಜ್ಯಪಾಲ ಗೆಹ್ಲೋಟ್ ಕರೆ
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶನಿವಾರ ನಡೆದ ೪೪ನೆಯ ವಾರ್ಷಿಕ ಘಟಿಕೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ರ‍್ಯಾಂಕ್ ಜೊತೆಗೆ ಚಿನ್ನದ ಪದಕ ಮತ್ತು ಪದವಿ ಪ್ರದಾನ ನೆರವೇರಿಸಿ ಮಾತನಾಡಿದ ಅವರು, ಇಂದು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ದಿನವಾಗಿದ್ದು, ಈ ಸಂದರ್ಭದಲ್ಲಿ ತಮ್ಮ ಶಿಕ್ಷಣದ ಪ್ರಯಾಣಕ್ಕೆ ಮಾರ್ಗದರ್ಶನ ನೀಡಿದ ತಂದೆ ತಾಯಿ, ಗುರುಗಳು ಮತ್ತು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವುದನ್ನು ವಿದ್ಯಾರ್ಥಿಗಳು ಮರೆಯಬಾರದು ಎಂದರು.
ಪದವಿ ಶಿಕ್ಷಣ ಪೂರ್ಣಗೊಂಡ ನಂತರ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಲಿದ್ದು, ಈ ಸಂದರ್ಭ ತಮ್ಮ ಜವಾಬ್ದಾರಿಯನ್ನು ಮರೆಯಬಾರದು. ಪ್ರತಿಯೊಂದು ಕ್ಷೇತ್ರದಲ್ಲೂ ವಿಭಿನ್ನ ಸಾಮರ್ಥ್ಯ ಮತ್ತು ಕೌಶಲ್ಯಗಳ ಅಗತ್ಯವಿದ್ದರೂ, ನಿರಂತರವಾಗಿ ಕಲಿಯುವ ಮನೋಭಾವ, ನೈತಿಕ ಮೌಲ್ಯಗಳ ಪಾಲನೆ, ಸತ್ಯನಿಷ್ಠೆ, ಕಠಿಣ ಪರಿಸ್ಥಿತಿಗಳಲ್ಲಿ ಧೈರ್ಯದಿಂದ ಎದುರಿಸುವ ಶಕ್ತಿ, ತಂಡದ ಕೆಲಸ ಮತ್ತು ಸಮಯ ಸಂಪನ್ಮೂಲಗಳ ಸಮರ್ಪಕ ಬಳಕೆ ಮುಂತಾದ ಗುಣಗಳು ಯಶಸ್ಸಿಗೆ ಅಗತ್ಯ ಎಂದು ರಾಜ್ಯಪಾಲರು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಸಾಮರ್ಥ್ಯವನ್ನು ವೈಯಕ್ತಿಕ ಲಾಭಕ್ಕೆ ಮಾತ್ರ ಬಳಸದೆ, ಸಮಾಜ ಮತ್ತು ರಾಷ್ಟ್ರದ ಹಿತಕ್ಕಾಗಿ ಬಳಸಬೇಕು. ಇಂತಹ ಗುಣಗಳು ಅವರನ್ನು ಒಳ್ಳೆಯ ವೃತ್ತಿಪರರಷ್ಟೇ ಅಲ್ಲ, ಜವಾಬ್ದಾರಿಯುತ ಮತ್ತು ಸಂವೇದನಾಶೀಲ ನಾಗರಿಕರನ್ನಾಗಿ ರೂಪಿಸುತ್ತವೆ ಎಂದು ಅವರು ಹೇಳಿದರು.
ಘಟಿಕೋತ್ಸವ ಭಾಷಣ ಮಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪದವಿ ಪಡೆದು ಹೊರ ಬರುವ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಮರೆಯಬಾರದು. ಸಮಾಜಕ್ಕೆ ತಮ್ಮಿಂದಾದ ಕೊಡುಗೆ ನೀಡಬೇಕು. ಈ ಮಣ್ಣಿನ ಅಸ್ಮಿತೆ ಉಳಿಸುವ ಕೆಲಸ ಮಾಡಬೇಕು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯವು ಹರೇಕಳ ಹಾಜಬ್ಬ, ರವೀಶ್ ಪಡುಮಲೆ ಹಾಗೂ ಸೂರಿಕುಮೇರು ಗೋವಿಂದ ಭಟ್‌ಗೆ ಗೌರವ ಡಾಕ್ಟರೇಟ್ ನೀಡುವ ಮೂಲಕ ದ.ಕ. ಜಿಲ್ಲೆಯ ಮಣ್ಣಿನ ಅಸ್ಮಿತೆಯನ್ನು ಎತ್ತಿ ಹಿಡಿದೆ ಎಂದರು.
ಇದೇ ಸಂದರ್ಭ ಅಕ್ಷರ ಸಂತ ಹರೇಕಳ ಹಾಜಬ್ಬ, ದೈವ ನರ್ತಕ ಡಾ.ರವೀಶ್ ಪಡುಮಲೆ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಲಾಯಿತು.
ವಿಶ್ವವಿದ್ಯಾನಿಲದ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಕುಲಸಚಿವ ಪ್ರೊ.ದೇವೇಂದ್ರಪ್ಪ ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ಘಟಿಕೋತ್ಸವದಲ್ಲಿ ವಿವಿಧ ನಿಕಾಯಗಳ 162 ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ, 56 ಚಿನ್ನದ ಪದಕ ಹಾಗೂ 57 ನಗದ ಬಹುಮಾನಗಳೊಂದಿಗೆ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳ ಒಟ್ಟು 147 ರ‍್ಯಾಂಕ್‌ಗಳಲ್ಲಿ ಪ್ರಥಮ ರ‍್ಯಾಂಕ್‌ಪಡೆದ 69 ವಿದ್ಯಾರ್ಥಿಗಳಿಗೆ ರ‍್ಯಾಂಕ್ ಪ್ರಮಾಣ ಪತ್ರ ವಿತರಿಸಲಾಯಿತು.
ವಿಶ್ವವಿದ್ಯಾನಿಲದ ಕುಲಪತಿ ಪ್ರೊ.ಪಿ.ಎಲ.ಧರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ಪ್ರಭಾರ ಕುಲಸಚಿವ ಗಣೇಶ್ ಸಂಜೀವ್, ಹಣಕಾಸು ಅಧಿಕಾರಿ ಪಂಚಲಿಂಗಸ್ವಾಮಿ, ಮಂಗಳೂರು ವಿವಿಯ ವಿವಿಧ ನಿಕಾಯಗಳ ಡೀನ್‌ಗಳು, ಸಿಂಡಿಕೇಟ್ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ತೆಂಕುತಿಟ್ಟಿನ ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ (ಮರಣೋತ್ತರ) ಅವರಿಗೆ ಘೋಷಣೆಯಾಗಿರುವ ಗೌರವ ಡಾಕ್ಟರೇಟ್ ಅನ್ನು ಏ. 13ರಂದು ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಹಸ್ತಾಂತರಿಸುವುದಾಗಿ ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ತಿಳಿಸಿದರು.