ಕೊಂಕಣಿ ಸಾಹಿತ್ಯ ಅಕಾಡೆಮಿಯ 2025ರ ಪ್ರಶಸ್ತಿ ಪ್ರಕಟ
2025ನೇ ಸಾಲಿನ ಗೌರವ ಪ್ರಶಸ್ತಿಗೆ ಕೊಂಕಣಿ ಸಾಹಿತ್ಯ ವಿಭಾಗದಲ್ಲಿ ರೊನ್ ರೊಚ್ ಕಾಸ್ಸಿಯಾ, ಕೊಂಕಣಿ ಕಲೆ ವಿಭಾಗದಲ್ಲಿ ರಾಮದಾಸ ದತ್ತಾತ್ರೇಯ ಗುಲ್ವಾಡಿ ಹಾಗೂ ಕೊಂಕಣಿ ಜಾನಪದ ವಿಭಾಗದಲ್ಲಿ ಸೈರು (ಮುರಳೀಧರ) ಪುತ್ತು ನಾಯ್ಕ ಅವರನ್ನು ಆಯ್ಕೆ ಮಾಡಲಾಗಿದೆ.
2025ನೇ ಸಾಲಿನ ಪುಸ್ತಕ ಪುರಸ್ಕಾರಕ್ಕೆ ಕೊಂಕಣಿ ಕವನ ವಿಭಾಗದಲ್ಲಿ ಕವಿ ಆಂಡ್ರ್ಯೂ ಎಲ್. ಡಿಕುನ್ಹಾರವರ ‘ಉಜ್ವಾಡಾಚ್ಯೆ ವೆಂಗೆಂತ್’ ಪುಸ್ತಕ, ಕೊಂಕಣಿ ಲೇಖನ ವಿಭಾಗದಲ್ಲಿ ಲೇಖಕ ರೋಶನ್ ಮೆಲ್ಕಿ ಸಿಕ್ವೇರಾರವರ ‘ಕೊಂಕ್ಣಿ ಸರ್ಕಸ್’ ಪುಸ್ತಕ, ಕೊಂಕಣಿ ಸಣ್ಣಕಥೆಗಳ ವಿಭಾಗದಲ್ಲಿ ಲೇಖಕ ರಿಚರ್ಡ್ ಆಲ್ವಾರಿಸ್ರವರ ‘ಫಿತುರಿ’ ಪುಸ್ತಕವನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ ಪ್ರದಾನ ಕಾರ್ಯಕ್ರಮವು ಏ.26 ರಂದು ಸಂಜೆ 5 ಗಂಟೆಗೆ ಉಡುಪಿ ಜಿಲ್ಲೆಯ ಉದ್ಯಾವರ ಚರ್ಚ್ ವಠಾರದಲ್ಲಿ ನಡೆಯಲಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ಎಸ್. ತಂಗಡಗಿಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿರುವರು. ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರ ಅಧ್ಯಕ್ಷತೆಯಲ್ಲಿ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹಾಗೂ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ. ವಂ. ಗುರು ಜೆರಾಲ್ಡ್ ಐಸಾಕ್ ಲೋಬೊ ಇವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖಾರ್ವಿ, ಸಿದ್ಧಿ, ಕುಡುಬಿ ಸಮುದಾಯದ ಸಾಂಸ್ಕೃತಿಕ ನೃತ್ಯ, ಬ್ರಾಸ್ ಬ್ಯಾಂಡ್ ಹಾಗೂ ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸದಸ್ಯರುಗಳಾದ ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ, ಮಾಧ್ಯಮ ಸಲಹೆಗಾರ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.