ಆಟೋ ಎಲ್‌ಪಿಜಿಗೆ ಚಾಲಕರ ಪರದಾಟ
ಮಂಗಳೂರು: ಮಧ್ಯಪಾಚ್ಯ ಸಂಘರ್ಷವೂ ಈಗಾಗಲೇ ಜನಸಾಮಾನ್ಯರ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ವ್ಯತಿರಿಕ್ತ ಪರಿಣಾಮ ಬಿರುತ್ತಿರುವಂತೆಯೇ ಕರಾವಳಿಯಲ್ಲಿ ಆಟೋ ಎಲ್‌ಪಿಜಿ ಕೊರತೆಯಾಗಿ ಆಟೋ ಚಾಲಕರು ಪರದಾಡುವಂತಾಗಿದೆ. ಸಕಾಲಕ್ಕೆ ಗ್ಯಾಸ್ ಸಿಗದೆ ಆಟೋ ಚಾಲಕರು ಫಿಲ್ಲಿಂಗ್ ಸ್ಟೇಶನ್ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.
ಮಂಗಳೂರು ಬಲ್ಮಠದ ಗೋ ಗ್ಯಾಸ್ ಹೆಸರಿನ ಆಟೋ ಎಲ್‌ಪಿಜಿ ಫಿಲ್ಲಿಂಗ್ ಸ್ಟೇಷನ್ ಮುಂದೆ ಆಟೋ ಚಾಲಕರು ಕಿಮೀ ಉದ್ದಕ್ಕೂ ಸರತಿ ಸಾಲಿನಲ್ಲಿ ನಿಂತಿದ್ದು ಟ್ರಾಫಿಕ್ ಜಾಮ್ ಉಂಟಾಗಲು ಕಾರಣವಾಗಿದೆ.
ಗ್ಯಾಸ್ ಸ್ಟೇಶನ್ ಮುಂದೆ ಆಟೋಗಳು ಸಾಲುಗಟ್ಟಿದ್ದು ಯಾವಾಗ ಗ್ಯಾಸ್ ಸಿಗುತ್ತದೆ ಎಂಬ ಆತಂಕದಲ್ಲಿದ್ದಾರೆ. ಗ್ಯಾಸ್ ಸ್ಟೇಶನ್‌ನಲ್ಲಿ ಫಿಲ್ಲಿಂಗ್ ಮಾಡುತ್ತಿದ್ದರೂ ಆಟೋ ಚಾಲಕರು ಗ್ಯಾಸ್ ಕೊರತೆ ಇದೆಯೆಂಬ ವದಂತಿಗೀಡಾಗಿದ್ದು ಸ್ಟೇಶನ್ ಮುಂದೆ ಸೇರಿದ್ದಾರೆ. ಪಂಪ್‌ನಲ್ಲಿ ಗ್ಯಾಸ್ ಇದೆಯೆಂದು ಅಲ್ಲಿನ ಸಿಬಂದಿ ಹೇಳುತ್ತಿದ್ದಾರೆ. ಆಟೋ ಚಾಲಕರು ರಸ್ತೆಯಲ್ಲಿ ಸಾಲುಗಟ್ಟಿದ್ದರಿಂದ ಟ್ರಾಫಿಕ್ ತೊಂದರೆಯಾಗಿದ್ದು ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪರದಾಡಿದ್ದಾರೆ. ಎಸ್‌ಸಿಎಸ್ ಆಸ್ಪತ್ರೆ ರಸ್ತೆಯ ಉದ್ದಕ್ಕೂ ಆಟೋಗಳು ಸಾಲುಗಟ್ಟಿ ನಿಂತಿವೆ.
ಇದೇ ವೇಳೆ, ಆಟೋ ಗ್ಯಾಸ್ ದರವು ಏ.1ರ ಬಳಿಕ ಏರಿಕೆಯಾಗುತ್ತದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಗ್ಯಾಸ್ ಸ್ಟೇಶನ್ ಕಡೆಯಿಂದಲೇ ಕೃತಕ ಅಭಾವ ಸೃಷ್ಟಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಆಟೋ ಸಿಎನ್‌ಜಿ ಸ್ಟೇಶನ್ ಹಲವು ಕಡೆ ಲಭ್ಯವಿದ್ದರೂ ಎಲ್‌ಪಿಜಿ ಸ್ಟೇಶನ್ ಹೆಚ್ಚಿಲ್ಲ. ಮಂಗಳೂರು ನಗರ ಒಳಭಾಗದಲ್ಲಿ ಬಲ್ಮಟ ಈ ಸ್ಟೇಶನ್ ನಲ್ಲಿ ಮಾತ್ರ ಲಭ್ಯ ಇದೆ. ಹೀಗಾಗಿ ನಾಡಿದ್ದು ಬೆಲೆ ಏರುತ್ತದೆ ಮತ್ತು ಗ್ಯಾಸ್ ಕೊರತೆಯಾಗುತ್ತದೆ ಎಂಬ ವದಂತಿ ನಂಬಿ ಆಟೋ ಚಾಲಕರು ಸ್ಟೇಶನ್ ಮುಂದೆ ಸಾಲುಗಟ್ಟಿದ್ದಾರೆ. ಆದರೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಿಲ್ಲ, ಆಟೋ ಚಾಲಕರು ಕೂಡ ಗಾಬರಿಯಾಗಬೇಡಿ ಎಂದು ಹೇಳಿದೆ.