ಕ್ರೂಸ್ ಹಡಗು ಎಂಎಸ್ ಸಿರೇನಾ ಮಂಗಳೂರಿಗೆ
ಮಾರ್ಷಲ್ ಐಲ್ಯಾಂಡ್ಸ್ ಧ್ವಜದಡಿ ಸಂಚರಿಸುವ ಹಾಗೂ ನಾರ್ವೇಜಿಯನ್ ಕ್ರೂಸ್ ಲೈನ್ ಹೋಲ್ಡಿಂಗ್ಸ್ ಸಂಸ್ಥೆ ನಿರ್ವಹಿಸುವ ಈ ಹಡಗು ಕೊಚ್ಚಿಯಿಂದ ಬೆಳಗ್ಗೆ ಸುಮಾರು 9 ಗಂಟೆಗೆ ಮಂಗಳೂರು ಬಂದರಿಗೆ ತಲುಪಿತು. ಕೊಲಂಬೊ-ಕೊಚ್ಚಿ-ಮಂಗಳೂರು-ಗೋವಾ-ಮುಂಬೈ ಅಂತಾರಾಷ್ಟ್ರೀಯ ಮಾರ್ಗದಲ್ಲಿ ಸಂಚರಿಸುತ್ತಿರುವ ಹಡಗಿನಲ್ಲಿ 619 ಪ್ರಯಾಣಿಕರು ಮತ್ತು 390 ಸಿಬ್ಬಂದಿ ಇದ್ದರು.
ಕ್ರೂಸ್ ಟರ್ಮಿನಲ್‌ನಲ್ಲಿ ಪ್ರವಾಸಿಗರಿಗೆ ಸಾಂಪ್ರದಾಯಿಕವಾಗಿ ಸ್ವಾಗತ ನೀಡಲಾಯಿತು. ಪ್ರವಾಸಿಗರ ಸೌಲಭ್ಯಕ್ಕಾಗಿ ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ವಿಶೇಷ ವ್ಯವಸ್ಥೆ ಮಾಡಿತ್ತು.
ಮಂಗಳೂರಿನ ಗೋಕರ್ಣನಾಥೇಶ್ವರ ದೇವಸ್ಥಾನ, ಸೇಂಟ್ ಅಲೋಯ್ಸಿಯಸ್ ಚಾಪೆಲ್, ಸಾವಿರ ಸ್ತಂಭಗಳ ಜೈನ ದೇವಸ್ಥಾನ ಸೇರಿದಂತೆ ಹಲವು ಪ್ರವಾಸಿ ತಾಣಗಳನ್ನು ವೀಕ್ಷಿಸಲು ಪ್ರವಾಸಿಗರಿಗೆ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಧ್ಯಾನ ಸತ್ರಗಳನ್ನೂ ಆಯೋಜಿಸಲಾಯಿತು.
ಸಂಜೆ ವೇಳೆಗೆ ಈ ಹಡಗು ಮುಂದಿನ ಗಮ್ಯಸ್ಥಾನವಾದ ಮರ್ಮುಗಾವ್ ಬಂದರಿಗೆ ಪ್ರಯಾಣ ಬೆಳೆಸಲಿದೆ.