ಪಿಲಿಕುಳದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ಮಾತನಾಡಿ, ಹೆಣ್ಣು ಮಕ್ಕಳು ಕತ್ತಲ ಕೋಣೆಯಲ್ಲಿ ಬದುಕಬೇಕಾದ ಕಾಲ ಹಿಂದೆ ಇತ್ತು. ಈಗ ಅದು ಸಂಪೂರ್ಣವಾಗಿ ಬದಲಾವಣೆಯಾಗಿ ವರ್ಷದ 365 ದಿನಗಳೂ ಕೂಡಾ ತಮ್ಮ ಹಕ್ಕುಗಳನ್ನು ಅನುಭವಿಸಿಕೊಂಡು ಜೀವಿಸಿವಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲಿನ ಅವಕಾಶವನ್ನು ಪಡೆಯುವ ಹಕ್ಕು ಎಲ್ಲಾ ಮಹಿಳೆಯರಿಗೂ ಇದೆ. ನಮ್ಮ ಯಶಸ್ಸನ್ನು ಸಾಧಿಸಲು ನಾವೇ ಶ್ರಮ ಪಟ್ಟು ಮುಂದುವರಿಯಬೇಕು ಎಂದು ಕರೆ ಕೊಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಖಾಂತರ ಉಚಿತ ಕಾನೂನು ಸೇವೆಗಳನ್ನು ಹಾಗೂ ಮಹಿಳೆಯರ ಮತ್ತು ಮಕ್ಕಳ ಸಹಾಯವಾಣಿಗಳ ಸಂಪೂರ್ಣ ಸದುಪಯೋಗವನ್ನು ಎಲ್ಲರೂ ಪಡೆದಕೊಳ್ಳಲು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪಿಲಿಕುಳ ಜಿಲ್ಲಾ ಮಟ್ಟದ ಪ್ರಾಧಿಕಾರ ಸಮಿತಿಯ ಸದಸ್ಯ ಎನ್.ಜಿ. ಮೋಹನ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳಿಗೆ ತಮ್ಮ ತಮ್ಮ ಅಧಿಕಾರದ ಅರಿವು ಇದೆ. ಮುಖ್ಯವಾಗಿ ಎಲ್ಲರಿಗೂ ವಿದ್ಯಾಭ್ಯಾಸ ಸಿಗುವ ಹಾಗೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಮಹಿಳೆಯರು ಸ್ವಶಕ್ತಿಯಿಂದ ಬೆಳೆದಾಗ ಮಾತ್ರ ಸದೃಡ ಸಮಾಜ ನಿರ್ಮಾಣ ಆಗಲು ಸಾಧ್ಯ ಎಂದರು.
ವಾಮಂಜೂರಿನ ಧರ್ಮ ಜ್ಯೋತಿ ಸೇವಾ ಸಂಸ್ಥೆಯ ನಿರ್ದೇಶಕಿ ಭಗಿನಿ ವೀರಾ ಮೊನಿಸ್ ಮಾತನಾಡಿ, ಮಹಿಳಾ ಸಬಲೀಕರಣ ಹಕ್ಕಾಗಿ ಬೆಳೆಯಬೇಕು, ಭಯ ಮುಕ್ತ ವಾತಾವರಣದಲ್ಲಿ ಪ್ರೀತಿ, ತಾಳ್ಮೆ, ಸಹಬಾಳ್ವೆಯಿಂದ ಜೀವನ ನಡೆಸುವುದರ ಮುಖಾಂತರ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕೆಂದರು.
ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್ ವಕೀಲೆ ಮಾನಸ ಹೆಗ್ಡೆ ಮಾತನಾಡಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ, 2012 ಮತ್ತು ಮಹಿಳಾ ಸಂಬಂಧಿ ಕಾನೂನುಗಳ ಹಾಗೂ ಮಾನಸಿಕ ಆರೋಗ್ಯ ಕುರಿತು ವಿವರವಾದ ಮಾಹಿತಿ ನೀಡಿದರು.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಅಶೋಕ್ ಕೆ.ಆರ್. ಮಾತನಾಡಿ, ಕೌಟುಂಬಿಕ ವಿಷಯಗಳಲ್ಲಿ ಮಹಿಳೆಯರು ಅತ್ಯಂತ ಜಾಗರೂಕರಾಗಿದ್ದು ಮಕ್ಕಳ ಮತ್ತು ಸಾಂಸಾರಿಕ ಸಮಸ್ಯೆಗಳ ಬಗ್ಗೆ ಸಮಯೋಚಿತ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾ, ಸಂಬಂಧಗಳನ್ನು ಬೆಸೆಯುವ ಕೌಶಲ್ಯಗಳನ್ನು ಬೆಳೆಸಿಕೊಂಡು ಪ್ರೀತಿ, ಸ್ನೇಹ, ತಾಳ್ಮೆಯಿಂದ ಸಂಸಾರವನ್ನು ನಿಭಾಯಿಸಿಕೊಂಡು ಸದೃಡ ಸಮಾಜವನ್ನು ನಿರ್ಮಾಣ ಮಾಡಬೇಕೆಂದರು.
ದಿನಾಚರಣೆಯ ಪ್ರಯುಕ್ತ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಮಹಿಳಾ ಸ್ವಚ್ಚತಾ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.